ಪಡಿತರ ವಿತರಣೆಯಲ್ಲಿ ತಾರತಮ್ಯ: ಘೇರಾವ್
ಹಾನಗಲ್ಲ: ಪಡಿತರ ವಿತರಣೆಯಲ್ಲಿ ತಾರತಮ್ಯ ಮಾಡಿದ ಶಿರಗೋಡ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ ಸಿದ್ದಪ್ಪ ದೊಡ್ಡಮನಿಗೆ ಘೇರಾವು ಹಾಕಿದ್ದಲ್ಲದೆ, ದಾಸ್ತಾನು ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೈ ಕೈ ಮಿಲಾಯಿಸಿದ ಘಟನೆಗೂ ಕಾರಣವಾಗಿ, ಮಾನೇಜರ್ ಅವರನ್ನು ವರ್ಗಾಯಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ಶಿರಗೋಡ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣೆ ಆರಂಭವಾಗಿತ್ತಾದರೂ ವಿತರಣೆಯಲ್ಲಿ ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಪಡಿತರ ವಿತರಣೆ ನಡೆದಿತ್ತು. ಇದನ್ನು ಗಮನಿಸಿದ ಪಡಿತರ ಫಲಾನುಭವಿಗಳು ವಿತರಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್ ಸಿದ್ದಪ್ಪ ದೊಡ್ಡಮನಿಗೆ ಈ ತಾರತಮ್ಯಕ್ಕೆ ಕಾರಣ ಕೇಳಿದಾಗ ಮಾತಿಗೆ ಮಾತು ಬೆಳೆದು ಗದ್ದಲವೇ ಆರಂಭವಾಯಿತು. 20 ಕೆಜಿ ಅಕ್ಕಿ ಕೊಡಬೇಕಾದವರಿಗೆ 8 ಕೆಜಿ ಅಕ್ಕಿ, ಸೀಮೆ ಎಣ್ಣೆ ಪ್ರತಿ ಲೀಟರಿಗೆ 2 ರುಪಾಯಿ ಅಧಿಕ ತೆಗೆದುಕೊಳ್ಳುತ್ತಿದ್ದರು. ಗೋದಿ ಸ್ಟಾಕ್ ಸರಿಯಾಗಿರಲಿಲ್ಲ, ಅಕ್ಕಿಯನ್ನು ನೆಲದ ಮೇಲೆ ಹಾಕಿ ಬೇಕಾಬಿಟ್ಟಿ ವಿತರಿಸುತ್ತಿದ್ದರು. ಈ ಸಂದರ್ಭದಲ್ಲಿ ಸುರೇಶ ಅಗಸನಹಳ್ಳಿ ಎಂಬುವವರು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ವಿಷಯ ಗಮನಕ್ಕೆ ತಂದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಹಾನಗಲ್ಲ ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ಹಾಗೂ ಆಹಾರ ಇಲಾಖೆಯ ಸುಪರಿಂಟೆಂಡೆಂಟ್ ಎಸ್.ಎಂ. ಸಿರ್ಸಿ ಫಲಾನುಭವಿಗಳು ಹಾಗೂ ವಿತರಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ತಕ್ಷಣದಿಂದ ಪಡಿತರ ವಿತರಣೆ ಸ್ಥಗಿತಗೊಳಿಸಿ, ದಾಸ್ತಾನು ಲೆಕ್ಕ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಶಿರಗೋಡ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್ ಸಿದ್ದಪ್ಪ ದೊಡ್ಡಮನಿ ಅವರನ್ನು ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಹಾನಗಲ್ಲ ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ಹಾಗೂ ಆಹಾರ ಇಲಾಖೆಯ ಸುಪರಿಂಟೆಂಡೆಂಟ್ ಸಿರ್ಸಿ ಈ ಪ್ರಕರಣದ ತನಿಖೆ ನಡೆಸಿದ ನಂತರ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಪರಿಸ್ಥಿತಿ ಶಾಂತವಾಯಿತು.
--