ಬ್ಯಾಡಗಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಬ್ಯಾಡಗಿ: ಬರುವ ಜೂ.15ರಂದು ಪಟ್ಟಣದಲ್ಲಿ ನಡೆಸಲು ನಿರ್ಧರಿಸಿದ್ದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಯಿತು. ಶುಕ್ರವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕವು ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಶಿಕ್ಷಕರ ಸಭಾ ಭವನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮುಂದೂಡುವ ನಿರ್ಧಾರಕ್ಕೆ ಬರಲಾಯಿತು.
ಇದೀಗ ನಿರ್ಧರಿಸುವ ದಿನಾಂಕದೊಳಗಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಿಲ್ಲ ಮತ್ತು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಅತಿಥಿಗಳು ಸದರಿ ದಿನಾಂಕದಂದು ಲಭ್ಯವಿಲ್ಲದಿರುವ ಕುರಿತು ಸದಸ್ಯ ನಾಗರಾಜ ಗುತ್ತಲ ಸಭೆಯಲ್ಲಿ ಪ್ರಸ್ತಾಪಿಸಿದರಲ್ಲದೇ, ತರಾತುರಿಯಲ್ಲಿ ಇಂತಹ ಬಹುದೊಡ್ಡ ಕಾರ್ಯಕ್ರಮ ನಡೆಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಮುಂದೂಡುವುದು ಸೂಕ್ತ ಎಂದರು.
ದಿನಾಂಕ ನಿಗದಿ ಇಲ್ಲ: ಶುಕ್ರವಾರ ನಡೆದ ಸಭೆಯಲ್ಲಿ ಸಮ್ಮೇಳನದ ಮುಂದಿನ ದಿನಾಂಕ ನಿರ್ಧರಿಸಲು ಸಾಧ್ಯವಾಗಲಿಲ್ಲ. ಮಳೆಗಾಲವಾದ್ದರಿಂದ ಬಯಲು ಪ್ರದೇಶಗಳಲ್ಲಿ ಸಮ್ಮೇಳನ ಆಯೋಜಿಸಲು ಸಾಧ್ಯವಿಲ್ಲ. ಯಾವುದಾದರೊಂದು ಕಲ್ಯಾಣ ಮಂಟಪದಲ್ಲಿ ಆಯೋಜಿಸುವುದೇ ಸೂಕ್ತವೆಂದು ಬಿ.ಎಂ. ಜಗಾಪುರ ಸಭೆಯಲ್ಲಿ ಪ್ರಸ್ತಾಪಿಸಿದರು.
ತಾಲೂಕಾಧ್ಯಕ್ಷ ಮಾಲತೇಶ ಅರಳೀಮಟ್ಟಿ, ಸದಸ್ಯರಾದ ಎಂ.ಎಂ. ಪಾಟೀಲ, ಆನಂದ ಮುದುಕಮ್ಮನವರ, ವೈ.ಟಿ. ಹೆಬ್ಬಳ್ಳಿ, ಮಂಜುನಾಥ ಪೂಜಾರ, ವೀರಭದ್ರಪ್ಪ ಹೊಂಬರಡಿ, ವಿ.ವಿ. ಮಾತನವರ, ಮಲ್ಲಪ್ಪ ಮತ್ತಿತರರು ಇದ್ದರು.