ಶೈಕ್ಷಣಿಕ ಕಾರ್ಯಕ್ರಮಗಳಿಂದ ಸಂತಸ: ಆನಂದ
ಹಿರೇಕೆರೂರ: ಶೈಕ್ಷಣಿಕ ಕಾರ್ಯಕ್ರಮಗಳು ಸಂತಸದಿಂದ ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳು ಸಂತಸದ ಕಲಿಕೆಯನ್ನು ಅನುಭವಿಸಬೇಕು. ಈ ನಿಟ್ಟಿನಲ್ಲಿ ಸಂತಸದ ವಾತಾವರಣವನ್ನು ನಿರ್ಮಿಸಬೇಕಾಗಿರುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ ಹೇಳಿದರು.
ತಾಲೂಕಿನ ದೂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಸರ್ಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದ್ದು, ಶಿಕ್ಷಕರು ಸಮುದಾಯದಲ್ಲಿರುವ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆತಂದು ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸ ಕೊಡಿಸಬೇಕು ಎಂದರು. ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಕೆಂಚಪ್ಪ ಗುಂಡಗಟ್ಟಿ ಉದ್ಘಾಟಿಸಿದರು. ಜಿಪಂ ಸದಸ್ಯೆ ಬಸಮ್ಮ ಅಬಲೂರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಬಸವರಾಜಪ್ಪ ಬೂಸೇರ ಮೊದಲಾದವರು ಮಾತನಾಡಿದರು. ನಂತರ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್. ಮಕಾಂದಾರ, ಎಸ್ಡಿಎಂಸಿ ಅಧ್ಯಕ್ಷ ಕುಮಾರ ಜಗಳೂರ, ಹೂವಪ್ಪ ವಡ್ಡಿನಕಟ್ಟಿ, ಮುಖಂಡರಾದ ಉಮೇಶ ಅಳಲಗೇರಿ, ಮಲ್ಲಿಕಾರ್ಜುನ ಬಡಲಿಂಗಪ್ಪನವರ, ಶಿವಾನಂದಪ್ಪ ಮುಚುಡಿ, ಶಂಭುಗೌಡ ಮರ್ಕಳ್ಳಿ, ಹಳ್ಳನಗೌಡ ಬಂಗಿಗೌಡ್ರ, ಶಿಕ್ಷಣ ಸಂಯೋಜಕ ಎಂ.ಎಸ್. ದಿವಿಗೀಹಳ್ಳಿ, ಎಂ.ಡಿ. ಕುರುಬರ, ಸಿ.ಎಸ್. ಹಾರನಳ್ಳಿ, ಬಿ.ಪಿ. ಬಿದರಿ ಇದ್ದರು.
ಮುಖ್ಯಶಿಕ್ಷಕ ದತ್ತರಾಜ ಜಾದವ ಸ್ವಾಗತಿಸಿದರು. ಶಿಕ್ಷಕ ಎಂ.ಆರ್. ಮಕರಿ ನಿರೂಪಿಸಿದರು.
-
ಕುಡುಪಲಿ: ಶಾಲಾ ಪ್ರಾರಂಭೋತ್ಸವ
ಹಿರೇಕೆರೂರು: ತಾಲೂಕಿನ ಕುಡುಪಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಎಸ್.ಜಿ. ಮಠದ ಮಾತನಾಡಿ, ಸರ್ಕಾರ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸದುಪಯೋಗಪಡಿಸಲು ಶಿಕ್ಷಕರು, ಪೋಷಕರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಮುದಾಯವು ಪೂರಕವಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಕರು ಸತತ ಅಧ್ಯಯನದ ಮೂಲಕ ತಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಸಂಪೂರ್ಣವಾಗಿ ನೀಡಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಬಟ್ಟೆ ವಿತರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಬುಡನಸಾಬ ಕಣಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರುಗಳಾದ ಆರ್.ಟಿ. ಹೊಸಮನಿ, ವಿ.ವಿ. ದೊಡ್ಡಗೌಡರ, ಕೆ.ಎಸ್. ಪಾಟೀಲ, ಎಸ್.ಎಸ್. ದೊಡ್ಡಮನಿ, ಪಿ.ಎಚ್. ಮೇದೂರ, ಜಿ. ಎನ್. ಕರಡೆಣ್ಣನವರ, ಕೆ.ಎಚ್. ಕುಸಗೂರ ಸೇರಿದಂತೆ ಶಿಕ್ಷಕ ಶಿಕ್ಷಕಿಯರು, ಶಾಲಾ ಮಕ್ಕಳು ಭಾಗವಹಿಸಿದ್ದರು.