ಸ್ಪರ್ಧೆ ಎದುರಿಸುವ ಮನೋಬಲ ಬೆಳೆಸಿ
ಹಾನಗಲ್ಲ: ಎಲ್ಲ ಕ್ಷೇತ್ರಗಳು ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸುತ್ತಿದ್ದು, ಇಂತಹ ಸ್ಪರ್ಧೆಯಲ್ಲಿ ಯಶಸ್ವಿಯಾಗುವ ಮನೋಬಲ ವಿದ್ಯಾರ್ಥಿಗಳಿಗೆ ಬೇಕು ಎಂದು ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಚೇರ್‌ಮನ್, ಮಾಜಿ ಸಚಿವ ಸಿ.ಎಂ. ಉದಾಸಿ ಕರೆ ನೀಡಿದರು.
ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಕಲಿಯುವಂತಹದ್ದು, ಅದು ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಬೇಕು. ವ್ಯರ್ಥ ಸಮಯ ಹರಣ ಸರ್ವತಾ ಸಲ್ಲದು, ಸಮಯವನ್ನು ಸದುಪಯೋಗಪಡಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಗ್ರಂಥಾಲಯದ ಪೂರ್ಣ ಪ್ರಯೋಜನ ಪಡೆಯಬೇಕು ಎಂದ ಮಾಜಿ ಸಚಿವ ಸಿ.ಎಂ. ಉದಾಸಿ, ನಕಾರಾತ್ಮಕ ಯೋಚನೆ ಬೇಡ ಸಕಾರಾತ್ಮಕ ಚಿಂತನೆಗೆ ಜೀವ ತುಂಬಿ ಮನಸ್ಸನ್ನು ಬಳಸಿಕೊಳ್ಳುವ ಯೋಚನೆ ನಿಮ್ಮದಾಗಲಿ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಹ್ಮದ ಶರೀಫ ಹಾನಗಲ್ಲ, ವಿದ್ಯಾರ್ಥಿಗಳಲ್ಲಿ ವಿನಯ ದೂರವಾಗುತ್ತಿದೆ. ದೇಶಪ್ರೇಮ, ದೇಶದ ಅಭಿವೃದ್ಧಿ ಯುವ ಜನತೆಯಿಂದ ದೂರವಾಗದೆ ಅದನ್ನು ಅಳವಡಿಸಿಕೊಳ್ಳುವಂತಾಗಬೇಕು. ಶಿಕ್ಷಣ ಬೇಕೇಬೇಕು. ಮನುಷ್ಯನಲ್ಲಿನ ಪರಿಪೂರ್ಣತೆಯನ್ನು ಹೊರತರುವುದೆ ನಿಜವಾದ ಶಿಕ್ಷಣ. ಯುವಕರು ಧೈರ್ಯದಿಂದ ಎಲ್ಲವನ್ನು ಸಾಧಿಸಬೇಕು. ಸಮಾನತೆ, ಸಹಕಾರ ಎಲ್ಲರ ಆಶಯವಾಗಬೇಕು ಎಂದರು. ಸಂಸ್ಥೆಯ ನಿರ್ದೇಶಕರಾದ ಎನ್.ಜಿ. ಕುಂಬಾರಿ, ಜಿ.ಎಸ್. ಕೊಂಡೋಜಿ, ಪ್ರಾಚಾರ್ಯ ಎನ್. ಸದಾಶಿವಪ್ಪ ಇದ್ದರು. ಜಿ.ವಿ. ಪ್ರಕಾಶ ಪ್ರಾಸ್ತಾವಿಕ ಮಾತನಾಡಿದರು. ರೇಖಾ ಶಿಗ್ಗಾವಿ ಕಾರ್ಯಕ್ರಮ ನಿರೂಪಿಸಿದರು. ಅನಿಲಕುಮಾರ ಗೌಡರ ವಂದಿಸಿದರು.