ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿ: ಮತ್ತೆ ಹಂದಿ ತೆರವು ಕಾರ್ಯಾಚರಣೆ?

Lingaraj Badiger
Updated On : 1 Jun 2013, 11:54 am

ಹಾವೇರಿ: ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ... ಎಂಬಂತೆ ವರಾಹಗಳು ನಗರ ಪ್ರದೇಶದಲ್ಲೆಲ್ಲ ಹಾಯಾಗಿ ಓಡಾಡಿಕೊಂಡಿದ್ದು, ಜನಸಾಮಾನ್ಯರು ನಗರಸಭೆ ಆಡಳಿತವನ್ನು ನಿತ್ಯವೂ ಶಪಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಹಂದಿಗಳನ್ನು ನಗರದಿಂದ ಮೂರು ಕಿಲೋಮೀಟರ್ ದೂರದ ಪ್ರದೇಶಗಳಿಗೆ ಸಾಗಿಸುವಂತೆ ಅನೇಕ ಬಾರಿ ನಗರಸಭೆ ಫರ್ಮಾನು ಹೊರಡಿಸಿದ್ದರೂ, ಹಂದಿಗಳ ಮಾಲೀಕರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇರುವುದು ನಗರಸಭೆ ಆದೇಶಕ್ಕೆ ಅವರು ಎಷ್ಟು ಮರ್ಯಾದೆ ನೀಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹಂದಿಗಳಿಂದ ಆಗುತ್ತಿರುವ ತೊಂದರೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ಶ್ರೀಸಾಮಾನ್ಯರು ನಗರಸಭೆ ವಿರುದ್ಧ ಬೀದಿಗಿಳಿಯಬಹುದೆಂಬ ಅನುಮಾನ ಬರುತ್ತಿದಂತೆಯೇ ಎಚ್ಚೆತ್ತುಕೊಂಡಿರುವ ಸ್ಥಳೀಯ ಸಂಸ್ಥೆ ಇದೀಗ, ಹಂದಿಗಳನ್ನು ನಗರದ ಪ್ರದೇಶದಿಂದ ಹೊರಹಾಕುವುದಾಗಿ ಹೂಂಕರಿಸಿದೆ. ಈ ಬಾರಿಯಾದರೂ ಹಾವೇರಿ ಹಂದಿಗಳ ಮುಕ್ತ ನಗರವಾಗುವುದೇ ಎಂಬುದು ಕುತೂಹಲ ಮೂಡಿಸಿದೆ.
ದಾಳಿಗೆ ತುತ್ತಾದ ಅಮಾಯಕರು: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಹಂದಿಗಳ ಉಪಟಳ ಹೇಳತೀರದು. ಎಲ್ಲೆಂದರಲ್ಲಿ ಹಂದಿಗಳು ಹಾಯುತ್ತವೆ. ಬರುವ ಹೋಗುವವರಿಗೆ ಅವುಗಳ ಕಿರಿಕಿರಿ ಸಾಕುಸಾಕಾಗಿದೆ. ಎಷ್ಟೋ ಮಕ್ಕಳ ಮೇಲೆ ಹಂದಿಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆಗಳು ನಡೆದಿವೆ. ಅಂತಹ ಸಂದರ್ಭಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗಳಲ್ಲಿ ಭೇಟಿ ಮಾಡುವ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಹಂದಿಗಳನ್ನು ಹೊರಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಹೋದ ಪ್ರಸಂಗಗಳು ಅಷ್ಟಿಷ್ಟಲ್ಲ. ಹಂದಿಗಳಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ. ಹತ್ತಾರು ಜನರು ಮಲೇರಿಯಾ, ವಾಂತಿ ಭೇದಿಗಳಿಂದ ಬಳಲುವಂತಾಗಿದೆ. ದ್ವಿಚಕ್ರವಾಹನಗಳಿಗೆ ಹಂದಿ ಅಡ್ಡ ಬರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಹಂದಿಗಳನ್ನು ಊರಿಂದ ಹೊರಹಾಕಿ ಎಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದು ಆಯಿತು. ನಗರಸಭೆ ಮಾತ್ರ ಲಕ್ಷ್ಯಕ್ಕೇ ತೆಗೆದುಕೊಂಡಿಲ್ಲ. ರಸ್ತೆತಡೆ, ಮುತ್ತಿಗೆ, ಹೀಗೆ ಎಲ್ಲ ಬಗೆಯ ಪ್ರತಿಭಟನೆಗಳನ್ನು ಮಾಡಿದ್ದೂ ಆಯಿತು. ನಗರಸಭೆ ಸಾಮಾನ್ಯ ಸಭೆಯಲ್ಲಿ ಕಳೆದ ಆಡಳಿತಾವಧಿಯಲ್ಲಿ ಹಂದಿಗಳ ವಿಷಯದಲ್ಲಿ ನಡೆದ ಚರ್ಚೆ, ಕೈಗೊಂಡ ನಿರ್ಣಯಗಳು ಸಾಕಷ್ಟು. ಹಾಗೆ ನೋಡಿದರೆ ಕಳೆದ ಅವಧಿಯಲ್ಲಿ ಆರು ತಿಂಗಳಿಗೊಮ್ಮೆ ನಗರಸಭೆ ಸಾಮಾನ್ಯ ಸಭೆ ನಡೆದಿದ್ದರೆ ಅದೇ ಹೆಚ್ಚು ಎನ್ನಬೇಕು. ಆದರೆ ಸಾಮಾನ್ಯ ಸಭೆಗಳಲ್ಲಿ ಹಂದಿಗಳ ವಿಷಯ ಕಡ್ಡಾಯವಾಗಿ ಚರ್ಚೆಯಾಗಿದೆ. ಒಂದು ಸಲವಂತೂ ನಗರಸಭೆಯ ಆಗಿನ ಹಲವು ಸದಸ್ಯರು ಊರಲ್ಲಿ ಹಂದಿ ಇರಲಿ ಅಥವಾ ಮಂದಿ ಇರಲಿ, ಮಂದಿರನ್ನಾದರೂ ಹೊರಹಾಕಿ ಇಲ್ಲವೇ ಹಂದಿಗಳನ್ನಾದರೂ ಹೊರಹಾಕಿ ಎಂದು ಆಗ್ರಹಿಸಿದ್ದುಂಟು.
ಅರ್ಧಕ್ಕೆ ಮೊಟಕು: ಆಗ ಒಂದೇ ವಾರದಲ್ಲಿ ಹಂದಿಗಳನ್ನೆಲ್ಲ ಹೊರಹಾಕಲು ನಗರಸಭೆ ನಿರ್ಧಾರ ಕೈಗೊಂಡಿತ್ತು. ಕೆಲವೊಂದಿಷ್ಟು ಹಂದಿಗಳನ್ನು ವಿಷ ಹಾಕಿಯೂ ಕೊಲ್ಲಲಾಗಿತ್ತು. ಈ ರೀತಿ ಕೊಲ್ಲುವುದಕ್ಕೆ ಆಗ ಹಂದಿ ಮಾಲೀಕರಿಂದ ವಿರೋಧ ವ್ಯಕ್ತವಾಗಿತ್ತು. ಹಂದಿ ಮಾಲೀಕರೆಲ್ಲ ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದ್ದರು. ಮುಂದೆ ನಗರಸಭೆಯಲ್ಲಿ ಹಂದಿ ಮಾಲೀಕರು ಹಾಗೂ ಆಡಳಿತ ಮಂಡಳಿಯೊಂದಿಗೆ ಅದೇನು ಒಪ್ಪಂದವಾಯಿತೋ ಏನೋ ಹಂದಿಗಳನ್ನು ಊರ ಹೊರಹಾಕುವ ತನ್ನ ನಿರ್ಧಾರವನ್ನು ನಗರಸಭೆ ಅರ್ಧಕ್ಕೆ ಮೊಟಕುಗೊಳಿಸಿತು. ಇದೀಗ ಮತ್ತೆ ಹಂದಿಗಳ ವಿಷಯ ನಗರಸಭೆಯಲ್ಲಿ ಮಾರ್ದನಿಸಿದೆ. ಮಾಲೀಕರು ತಮ್ಮ ಹಂದಿಗಳನ್ನು ನಗರದಿಂದ 3 ಕಿಲೋ ಮೀಟರ್ ಹೊರವಲಯಕ್ಕೆ ಸಾಕಬೇಕು. ಇಲ್ಲದಿದ್ದಲ್ಲಿ ಕಾನೂನು ಪ್ರಕಾರ ಹಂದಿಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಹಂದಿಮುಕ್ತ ನಗರವನ್ನಾಗಿ ಮಾಡುವುದಾಗಿ ನಗರಸಭೆ ಪೌರಾಯುಕ್ತರು ತಿಳಿಸಿರುವುದು ಸ್ವಾಗತಾರ್ಹವೇ. ಇನ್ನು ಮುಂದಾದರೂ ಹಂದಿಗಳ ಕಿರಿಕಿರಿ ಇರುವುದಿಲ್ಲ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆ. ಹಂದಿಗಳನ್ನು ಊರ ಹೊರಹಾಕಲು ಹಂದಿಗಳ ಮಾಲೀಕರು ಒಪ್ಪುವರೇ? ಅಥವಾ ನಗರಸಭೆ ಹಿಂದೆ ಆರಂಭಿಕ ಶೂರತ್ವ ತೋರಿಸಿದಂತೆ ಈ ಸಲವೂ ಆರಂಭಿಕ ಶೂರತ್ವ ತೋರಿಸಿ ಅನಂತರ ಸುಮ್ಮನಾಗುವುದೇ ಎಂಬುದು ಇದೀಗ ಎದ್ದಿರುವ ಪ್ರಶ್ನೆಯಾಗಿದೆ. ಉತ್ತರಕ್ಕೆ ಕೆಲ ದಿನಗಳ ಕಾಲ ಕಾಯಬೇಕಷ್ಟೆ...
-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement