81ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಆಗಲಿ: ಮಾಸಣಗಿ
ರಾಣಿಬೆನ್ನೂರು: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಒಪ್ಪಿಗೆ ನೀಡಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಆಗ್ರಹಿಸಿದರು.
ಸ್ವಾಬಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ನಗರದ ರೇಲ್ವೆ ನಿಲ್ದಾಣ ರಸ್ತೆಯಲ್ಲಿರುವ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ 58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಹಾವೇರಿಯಲ್ಲಿ 81ನೇ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡಲು ಜನವರಿಯಲ್ಲಿ ಮಡಿಕೇರಿಯಲ್ಲಿ ನಡೆಯುವ ಕಸಾಪ ಕಾರ್ಯಕ್ರಮದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ ಹಿರೇಮಠಾಧ್ಯಕ್ಷ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಕರ್ನಾಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಸಿ. ನಾಗರಜ್ಜಿ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಎನ್.ಎನ್. ನಸರುಲ್ಲಾ ಮಾತನಾಡಿದರು. ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಪೌರಕಾರ್ಮಿಕರಾದ ಭರಮವ್ವ ಶಿವಪ್ಪನವರ ಅವರಿಗೆ ಕಾಯಕ ಯೋಗಿ, ರೈತಪರ ಹೋರಾಟಗಾರ ಬಿ.ಎಂ. ಜಯದೇವ ಅವರಿಗೆ ರೈತ ಬಂಧು, ಡಾ ಶ್ರೀನಿವಾಸ ದೀಕ್ಷಿತರಿಗೆ ವೈದ್ಯ ಸಿರಿ, ಜಾನಪದ ಕಲಾವಿದ ಸಣ್ಣ ಸಿದ್ದಪ್ಪ ಅಟವಾಳಗಿ ಅವರಿಗೆ ಜಾನಪದ ಕಲಾಶ್ರಿ, ಆರೋಗ್ಯ ಇಲಾಖೆ ವಾಹನ ಚಾಲಕ ಅಶೋಕ ಆರ್. ಶಿವರಡ್ಡಿಗೆ ಸೇವಾಶ್ರೀ, ಸಾಹಿತಿ ಎನ್. ನೇಗಳೂರುಮಠಗೆ ಕನ್ನಡಶ್ರೀ, ಜನಪದ ಕಲಾವಿದ ಚನ್ನಗೌಡ ಸಾದರಗೆ ಜಾನಪದ ಸಿರಿ, ಸಮಾಜ ಸೇವಕ ವಿ.ಆರ್. ಪೂಜಾರಗೆ ಭಾವೈಕ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.