ಕನ್ನಡ ಕೊಂದ ತಹಸೀಲ್ದಾರ್, ಬಿಇಒ!
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 1
ಅಧಿಕಾರಿಗಳ ಗೈರು, ಸಂತೆಯಾಗಿದ್ದ ವೇದಿಕೆ, ಬಿಸಿಲಿನಿಂದ ಕಂಗೆಟ್ಟ ವಿದ್ಯಾರ್ಥಿಗಳು, ತೊದಲು ನುಡಿಯಲ್ಲಿ ಭಾಷಣ ಮಾಡಿದ ತಹಸೀಲ್ದಾರ್, ಅತಿಥಿಗಳನ್ನು ಅಪಮಾನಿಸಿದ ನಿರೂಪಕ - ಈ ಎಲ್ಲ ಅವ್ಯವಸ್ಥೆ ವಿರುದ್ಧ ಕರವೇ ಕಾರ್ಯಕರ್ತರು ಶುಕ್ರವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸಿದರು.
ಸನ್ಮಾನಕ್ಕೆ ಬಂದವರು ಅವಮಾನಕ್ಕೆ ಒಳಗಾದರು. ಅವ್ಯವಸ್ಥೆಯ ಕಾರ್ಯಕ್ರಮ ಖಂಡಿಸಿ ವೇದಿಕೆಯಿಂದ ಇಳಿದ ಜಿಪಂ-ತಾಪಂ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸದಸ್ಯರೂ ಹಿಂಬಾಲಿಸಿದರು. ಒಟ್ಟು ಕಾರ್ಯಕ್ರಮ ಅವ್ಯವಸ್ಥೆಯ ಪರಾಕಾಷ್ಠೆಯಾಗಿತ್ತು.
ಶುಕ್ರವಾರ ಮುಂಜಾನೆ 10.30ಕ್ಕೆ ಪಟ್ಟಣದ ಶರೀಫ-ಶಿವಯೋಗಿಗಳ ಮೈದಾನದಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ತರಾತುರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದ ತಹಸೀಲ್ದಾರ್ ಎಸ್.ಎ. ಚೌಗುಲೆ, ನಿರೂಪಕರು ಆಹ್ವಾನಿಸುವ ಮೊದಲೇ ಧ್ವಜಾರೋಹಣ ನೆರವೇರಿಸಿ ಮಾತಿಗಿಳಿದರು. ತೊದಲು ನುಡಿಯಲ್ಲಿ ಕರ್ನಾಟಕ ಏಕೀಕರಣ ಸಂದರ್ಭದ ಬಗ್ಗೆ ಮಾತನಾಡಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿತು.
ಕಾರ್ಯಕ್ರಮಕ್ಕೆ ಬಹಿಷ್ಕಾರ
ಬಳಿಕ ಅತಿಥಿಗಳನ್ನು ಸ್ವಾಗತಿಸಲು ಮೈಕ್ ಹಿಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ, ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅವರ ಹೆಸರನ್ನು ಕಲ್ಲಕೋಚೆ ಎಂದು, ಜಿಪಂ ಸದಸ್ಯ ಬಸವನಗೌಡ್ರ ಇನಾಮತಿ ಎಂದು ಕರೆಯುವ ಬದಲು ಶ್ರೀಮತಿ ಇನಮತಿ ಎಂದು ಸಂಬೋಧಿಸಿದ್ದು ಅತಿಥಿಗಳ ಆಕ್ರೋಶಕ್ಕೆ ತುಪ್ಪ ಸುರಿಯಿತು. ಈ ಅಧ್ವಾನಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ, ಪ್ರತಿಭಟನೆ ಆರಂಭಿಸಿದರು. ಎಲ್ಲ ಜನಪ್ರತಿನಿಧಿಗಳೂ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕಕ್ಕಾಬಿಕ್ಕಿಯಾದ ತಹಸೀಲ್ದಾರ್ ಅವ್ಯವಸ್ಥೆ ಬಗ್ಗೆ ಕ್ಷಮೆ ಕೋರಿದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಆದರೂ ಅರ್ಧ ಗಂಟೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಿಇಒ ಅಮಾನತಿಗೆ ಒತ್ತಾಯಿಸಿ, ಕಾರ್ಯಕ್ರಮ ಬಹಿಷ್ಕರಿಸಿದರು.
ನೀವೇ ಮಾಡಿಕೊಳ್ಳಿ
ಪೂರ್ವಭಾವಿ ಸಭೆಗಳಲ್ಲಿ ನೀಡಿದ್ದ ಸಲಹೆಗಳನ್ನು ಜಾರಿಗೆ ತಂದಿಲ್ಲ. ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಾತಿ ಎದ್ದು ಕಾಣುತ್ತಿದೆ. ಮಕ್ಕಳು ಬಿಸಿಲಿನ ತಾಪ ಅನುಭವಿಸಿದ್ದಾರೆ. ಮಾಧ್ಯಮಗಳಿಗೂ ಆಹ್ವಾನ ನೀಡಿಲ್ಲ. ನಿಮ್ಮ ಸ್ವಾರ್ಥದ ಕಾರ್ಯಕ್ರಮ ಇದು, ನೀವೇ ಮಾಡಿಕೊಳ್ಳಿ ಎಂದು ಅತಿಥಿಗಳು ನಿರ್ಗಮಿಸಿದರು. ಸಮಾಧಾನಿಸಲು ತಹಸೀಲ್ದಾರ್ ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಅತಿಥಿಗಳಿಲ್ಲದೆ ಭಣಗುಡುತ್ತಿದ್ದ ವೇದಿಕೆಯಲ್ಲಿ ಭುವನೇಶ್ವರಿ ಭಾಚಿತ್ರಕ್ಕೆ ನೆಪಮಾತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ತಹಸೀಲ್ದಾರರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ರಾಜ್ಯೋತ್ಸವ ಅದ್ಧೂರಿ ಆಚರಣೆ ಆಗದೇ ಇರುವ ಬಗ್ಗೆ ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ. ನಿರೂಪಣೆ ಮಾಡುತ್ತಿದ್ದ ಬಿಇಒ ಕನ್ನಡದ ಕಗ್ಗೊಲೆ ಮಾಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.