ನೀರಿನ ಸಮಸ್ಯೆ ನಿವಾರಿಸಿದ ಕೋಳಿವಾಡ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 1
ಅನುಭವಿ ನ್ಯಾಯವಾದಿಗಳೂ ಆಗಿರುವ ಕೆ.ಬಿ. ಕೋಳಿವಾಡರು ಐದನೇ ಬಾರಿ ಶಾಸಕರಾಗಿದ್ದಾರೆ. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಗ್ರಾಮೀಣ ನೀರು ಸರಬರಾಜು ಸಚಿವರಾಗಿ ಈ ಭಾಗದ 13 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶ್ರಮಿಸಿದ್ದರು ಎಂದು ಗದುಗಿನ ಮಾಜಿ ಶಾಸಕ ಡಿ.ಆರ್. ಪಾಟೀಲ ಶ್ಲಾಘಿಸಿದರು.
ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೇಡ್ಲೆರಿ ರಸ್ತೆಯಲ್ಲಿರುವ ಆಂಗ್ಲೋ ಉರ್ದು ಪ್ರೌಢಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡರ 70ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ತಾಲೂಕಿನ 35 ಗ್ರಾಪಂ ವ್ಯಾಪ್ತಿಯ 103 ಹಳ್ಳಿಗಳ ಜನರಿಗೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲು ವಿಶ್ವ ಬ್ಯಾಂಕ್ ನೆರವಿನಿಂದ ಕೈಗೊಂಡ ಜಲನಿರ್ಮಲ ಯೋಜನೆ ಮರೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸಂಪುಟದಲ್ಲಿ ಕೋಳಿವಾಡರು ಸಚಿವರಾಗಿ ಶೀಘ್ರ ಸೇರ್ಪಡೆಗೊಂಡು, ತಮ್ಮ ಅನುಭವ ಧಾರೆ ಎರೆಯಲಿದ್ದಾರೆ ಎಂದರು.
ಕ್ರಾಂತಿಕಾರಿ ಭಾಷಣ ಮಾಡುತ್ತ ದೇಶದಲ್ಲಿ ಜಾತೀಯತೆಯ ವಿಷಬೀಜ ಬಿತ್ತುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಂಥವರು ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದರೆ ಭಾರತ ದಾಸ್ಯದಿಂದ ಮುಕ್ತವಾಗುತ್ತಿರಲಿಲ್ಲ. ಕಾಂಗ್ರೆಸ್ ಬ್ರಿಟಿಷರ ವಿರುದ್ಧ ದೇಶದ ಜನರನ್ನು ಸಂಘಟಿಸಿ ಹೋರಾಡಿದ್ದರಿಂದ ಭಾರತಾಂಬೆ ಸ್ವತಂತ್ರಳಾಗಲು ಸಾಧ್ಯವಾಯಿತು ಎಂಬುದನ್ನು ಜನತೆ ಮರೆಯಬಾರದೆಂದರು.
ಧಾರವಾಡ ರೆಡ್ಡಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಪಕ್ಷ ನಾಯಕ ದೀಪಕ್ ಚಿಂಚೋರೆ, ಪದವೀಧರರ ಸಂಘದ ಅಧ್ಯಕ್ಷ ಟಿ. ಈಶ್ವರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ನಗರಸಭೆ ಉಪಾಧ್ಯಕ್ಷ ಶಿವಪ್ಪ ಮಣೇಗಾರ, ತಾಪಂ ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಭಾರ್ಕಿ, ಜಿಪಂ ಮಾಜಿ ಅಧ್ಯಕ್ಷ ಡಾ ಬಸವರಾಜ ಕೇಲಗಾರ, ಕಾಂಗ್ರೆಸ್ ಮುಖಂಡ ನೂರ ಅಹ್ಮದಖಾನ ಸೌದಾಗರ, ನಗರಸಭೆ ಮಾಜಿ ಸದಸ್ಯ ಡಿ.ಸಿ. ಕುಲಕರ್ಣಿ, ನ್ಯಾಯವಾದಿ ಎ.ಎಂ. ನಾಯ್ಕ, ನೋಟರಿ ಏಕಾಂತ ಮುದಿಗೌಡ್ರ, ರುಕ್ಮಿಣಿ ಸಾಹುಕಾರ, ಇಂದಿರಾ ಗಡ್ಡದಗೂಳಿ ಇದ್ದರು.
ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಕೋಳಿವಾಡರು, ತಮ್ಮ ಜೀವಿತಾವಧಿಯನ್ನು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯಲು ಬಳಸುವುದಾಗಿ ಹೇಳಿದರು.