ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಡವರ ಮನೆಗೆ ಅಡ್ಡಿಯಾದ ಮರಳು

Vishwanath S
Updated On : 4 Nov 2013, 11:55 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 3
ಸರ್ಕಾರ ಹೊಸ ಮರಳು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಕಾರಣ ನಗರಸಭೆ ವ್ಯಾಪ್ತಿಯ ಅಡವಿ ಆಂಜನೇಯ ದೇವಸ್ಥಾನದ ಹತ್ತಿರ 850 ಬಡ ಕುಟುಂಬಗಳಿಗಾಗಿ ಆಶ್ರಯ ಯೋಜನೆ ಅಡಿಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ಕಟ್ಟುತ್ತಿರುವ ಮನೆಗಳ ಕಾಮಗಾರಿ ಸ್ಥಗಿತಗೊಂಡಿದೆ.
ಹೆಸರಿಗೊಂದು ಊರು, ತಲೆಗೊಂದು ಸೂರು ಇರಬೇಕು ಎಂಬುದು ಹಿರಿಯರ ನಂಬಿಕೆ. ಆದರೆ, ಅಲ್ಲಿನ ಅನೇಕ ಬಡವರು ಇರಲು ಮನೆ ಇಲ್ಲದೆ, ನಿವೇಶನವೂ ಇಲ್ಲದೆ ಬಾಡಿಗೆ ಮನೆಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿದ್ದರು. ಇಂಥ 850 ಬಡ ಕುಟುಂಬಗಳನ್ನು  2012-13ನೇ ಸಾಲಿನಲ್ಲಿ ನಗರ ಆಶ್ರಯ ಸಮಿತಿ ಗುರುತಿಸಿ, ಆಯ್ಕೆ ಮಾಡಿತ್ತು. ಈ ಯೋಜನೆಯಂತೆ ತಮ್ಮ ಪಾಲಿನ ರು. 30 ಸಾವಿರ ಹಣವನ್ನು ಫಲಾನುಭವಿಗಳು ನಗರಸಭೆಯ ವಸತಿ ವಿಭಾಗಕ್ಕೆ ಎರಡು ವರ್ಷಗಳ ಹಿಂದೆಯೇ ಪಾವತಿಸಿ ಮನೆಗಾಗಿ ಕಾಯುತ್ತಿದ್ದಾರೆ.
ನಿವೇಶನ ರಹಿತರೆಂದು ಆಯ್ಕೆಯಾಗಿರುವ ಫಲಾನುಭವಿಗಳು ಹಣ ತುಂಬಿರುವ ಕುರಿತು ನಗರಸಭೆ ವರ್ಷದ ಹಿಂದೆಯೇ ರಾಜೀವ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನಿಗಮವು ಹಾವೇರಿ ಜಿಲ್ಲಾ ನಿರ್ಮಿತಿ ಕೇಂದ್ರದವರಿಗೆ ಅಡವಿ ಆಂಜನೇಯ ದೇವಸ್ಥಾನದ ಹತ್ತಿರವಿರುವ ಆಶ್ರಯ ನಿವೇಶನದಲ್ಲಿ 850 ಮನೆ ನಿರ್ಮಿಸಲು ಕಾರ್ಯಾದೇಶ ನೀಡಿತ್ತು. ಹೀಗಾಗಿ 9 ತಿಂಗಳ ಹಿಂದೆ ನಿರ್ಮಿತಿ ಕೇಂದ್ರ ಅಡವಿ ಆಂಜನೇಯ ಆಶ್ರಯ ಬಡಾವಣೆಯಲ್ಲಿ 418 ಮನೆಗಳನ್ನು ಕಟ್ಟಲು ಆರಂಭಿಸಿದೆ. ಆದರೆ, ಸಾಕಷ್ಟು ಮರಳು ಸಿಗದೆ ಕೆಲಸ ಸ್ಥಗಿತಗೊಳಿಸಿದೆ.
ಮರಳು ಸಿಗುತ್ತಿಲ್ಲ: ಸರ್ಕಾರ ಮತ್ತು ರಾಜ್ಯ ರಾಜೀವ ಗಾಂಧಿ ಗ್ರಾಮೀಣ ಆಶ್ರಯ ವಸತಿ ನಿಗಮದವರು ರಾಣಿಬೆನ್ನೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ಅಡವಿ ಆಂಜನೇಯ ದೇವಸ್ಥಾನದ ಹತ್ತಿರ ಖರೀದಿಸಿರುವ ಜಾಗೆಯಲ್ಲಿ ಬಡವರಿಗೆ 850 ಮನೆ ಕಟ್ಟಿಕೊಡುವಂತೆ ನಿಗಮ ಕಾರ್ಯಾದೇಶ ನೀಡಿದೆ. ಒಂಬತ್ತು ತಿಂಗಳ ಹಿಂದೆ ಕೆಲಸ ಆರಂಭಿಸಿದ್ದು, 418 ಮನೆಗಳ ನಿರ್ಮಾಣ ಶುರುವಾಗಿದೆ. ಈ ಪೈಕಿ 168 ಮನೆಗಳ ಕೆಲಸ ಮುಗಿದಿದೆ. 110 ಮನೆಗಳಿಗೆ ಆರ್ಸಿಸಿ ಮತ್ತು 140 ಮನೆಗಳಿಗೆ ಪ್ಲಿಂಥ್ ಹಾಕಲು ಸಿದ್ಧತೆ ನಡೆಸಿದ್ದೆವು. ಆದರೆ, ಸರ್ಕಾರದ ಹೊಸ ಮರಳು ನೀತಿಯಿಂದಾಗಿ ಮರಳು ಸಿಗದೆ, ಸಾಕಷ್ಟು ಅನುದಾನವೂ ಬಾರದೆ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ರಾಣಿಬೆನ್ನೂರು ತಾಲೂಕು ಅಭಿಯಂತ ವಾಗೀಶ ಬಿ.ಬಿ. ಶೆಟ್ಟರ ತಿಳಿಸಿದರು.
ಸಮಸ್ಯೆ ಪರಿಹರಿಸಲು ಮನವಿ: ಬಡವರು ಹಾಗೂ ವಸತಿ ರಹಿತರೆಂದು ಗುರುತಿಸಿರುವ 850 ಬಡವರಿಗೆ ಸರ್ಕಾರದ ಯೋಜನೆಯಲ್ಲಿ ಸ್ವಂತಕ್ಕೊಂದು ಸೂರು ನೀಡಿ, ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆ ಲಾಭ ಪಡೆಯಲು ನಿವೇಶನ ರಹಿತರೆಂದು ಆಯ್ಕೆಯಾಗಿರುವ 850 ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಹಣವನ್ನು ತುಂಬಿದ್ದಾರೆ. ಕಡುಬಡವರೆಂದು ಗುರುತಿಸಿರುವ ಕೆಲವರ ವಂತಿಗೆಯನ್ನು ನಗರಸಭೆಯೇ ರಾಜೀವ ಗಾಂಧಿ ಆಶ್ರಯ ವಸತಿ ನಿಗಮಕ್ಕೆ ತುಂಬಲು ಸಿದ್ಧವಾಗಿದೆ. ಮನೆ ಕಟ್ಟಲು ಅಡ್ಡಿಯಾಗಿರುವ ಮರಳಿನ ಕೊರತೆ ನಿವಾರಣೆಗೆ ಜಿಲ್ಲಾಧಿಕಾರಿಗಳು, ಶಾಸಕರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಮುಂದಾಗಬೇಕೆಂದು ಮನವಿ ಮಾಡಿದ್ದಾಗಿ ರಾಣಿಬೆನ್ನೂರು ನಗರಸಭೆಯ ಪೌರಾಯುಕ್ತೆ ಅಶ್ವಿನಿ ಬಿ.ಎಂ. ತಿಳಿಸಿದರು.
ಜಿಲ್ಲಾಡಳಿತ ಮರಳು ಪೂರೈಕೆಗೆ ಮುಂದಾದರೆ ಬಡವರಿಗೆ ಬೇಗನೆ ಸೂರು ಸಿಕ್ಕೀತು.


-ಸಾಬ್ಜನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement