ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಸ್ತೆ ಕಾಮಗಾರಿ ಕಳಪೆ: ಪ್ರತಿಭಟನೆ

Vishwanath S
Updated On : 4 Nov 2013, 11:47 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 3
ತಾಲೂಕಿನ ಬಂಕಾಪುರ ಪಟ್ಟಣದ ವಳಗೇರಿ ಓಣಿಯಲ್ಲಿ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಗುಣಮಟ್ಟದ್ದಾಗಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಜೆಸಿಬಿ ಯಂತ್ರವನ್ನು ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ರಸ್ತೆ ಕಾಮಗಾರಿ ಆರಂಭಿಸುವ ಪೂರ್ವದಲ್ಲಿ ರಸ್ತೆ ಬದಿಗಿರುವ ಕುಡಿಯುವ ನೀರಿನ ಪೈಪ್ಲೈನ್ ಸರಿಪಡಿಸಬೇಕು. ಜೆಸಿಬಿ ಯಂತ್ರಕ್ಕೆ ಸಿಲುಕಿ ಕೆಲವು ಕಡೆ ಪೈಪ್ಗಳು ಒಡೆದಿವೆ. ಕುಡಿಯುವ ನೀರಿನಲ್ಲಿ ಕೊಳಚೆ ಬೆರೆತು ರೋಗಗಳಿಗೆ ಆಹ್ವಾನ ನೀಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಎರಡು ತಿಂಗಳ ಹಿಂದೆ ಚರಂಡಿಗಳಲ್ಲಿದ್ದ ಕಸವನ್ನು ತೆಗೆದು ರಸ್ತೆ ಪಕ್ಕ ಹಾಕಲಾಗಿದೆ. ಈ ವರೆಗೆ ಕಸ ವಿಲೇವಾರಿ ಮಾಡಿಲ್ಲ. ರಸ್ತೆ ಕಾಮಗಾರಿ ಮಾಡುತ್ತಿರುವವರು ಕಸದ ಮೇಲೆಯೇ ಕಲ್ಲಿನ ಕಡಿ ಹಾಕುತ್ತಿದ್ದಾರೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಕಾಂಕ್ರೀಟ್ ಕಾಮಗಾರಿಗಾಗಿ ಕೈಗೊಳ್ಳುವ ಮುನ್ನ ಸರಿಯಾಗಿ ರಸ್ತೆ ಅಗೆದಿಲ್ಲ. ಕೆಲವು ಕಡೆ ರಸ್ತೆ ಅಗೆಯುವಾಗ ದೊಡ್ಡ ಕಲ್ಲಗಳು ಬಿದ್ದು, ಚರಂಡಿ ಮುಚ್ಚಿದೆ. ನೀರು ಸರಾಗವಾಗಿ ಹರಿಯುತ್ತಿಲ್ಲ. ಈ ಕುರಿತು ಅಧಿಕಾರಿಗಳು, ಗುತ್ತಿಗೆದಾರರು ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈಚೆಗೆ ಕಡಿಗಳ ಮೇಲೆ ಚಕ್ಕಡಿ ಉರುಳಿ ಬಿದ್ದು ರೈತರು ಹಾಗೂ ಎತ್ತುಗಳಿಗೆ ಗಾಯಗಳಾಗಿವೆ. ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸರ್ಕಾರದ ನಿಯಮಾವಳಿಯಂತೆ ಕಾಮಗಾರಿ ಕೈಗೊಂಡಿಲ್ಲ. ಗುತ್ತಿಗೆದಾರರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಬಸವರಾಜ ವಳಗೇರಿ, ಅಂದಾನಗೌಡ್ರ ಪಾಟೀಲ, ಸತೀಶ ವಳಗೇರಿ, ಬಾಪುಗೌಡ್ರ ಪಾಟೀಲ, ಉಳವಪ್ಪ ವಳಗೇರಿ, ಫಕ್ಕೀರಪ್ಪ ವಳಗೇರಿ, ಮಹಾಬಳೇಶ್ವರ ವಳಗೇರಿ, ದೇವಣ್ಣ ವಳಗೇರಿ, ಬಸವರಾಜ ದ್ಯಾಮಪ್ಪನವರ, ಬಸವರಾಜ ಕಳ್ಳಿಮನಿ, ವಿರೂಪಾಕ್ಷಪ್ಪ ಪವಾಡಿ, ರಾಮಣ್ಣ ವಳಗೇರಿ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement