ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರ ಮನೆಯಲ್ಲಿ ಠರಾವು ಪುಸ್ತಕ: ದೂರು
ಶಿಗ್ಗಾಂವಿ: ಪತ್ತಿನ ಸಹಕಾರಿ ಸಂಘದ ಠರಾವು ಪಸ್ತಕವನ್ನು ಅಧ್ಯಕ್ಷರು ಮನೆಗೆ ತೆಗೆದುಕೊಂಡು ಹೋಗಿದ್ದರಿಂದ ಸಂಘದ ಕೆಲಸಕ್ಕೆ ತೊಂದರೆಯಾಗಿದೆ. ತಕ್ಷಣ ಠರಾವು ಪುಸ್ತಕವನ್ನು ಸಂಘಕ್ಕೆ ಕೊಡಿಸಿ ಎಂದು ಸವಣೂರ ಎ.ಆರ್. ತಡಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ತಾಲೂಕಿನ ದುಂಡಶಿ ಗ್ರಾಮದಲ್ಲಿ ಜರುಗಿದೆ.
ಧಾರವಾಡ ಕೆಸಿಸಿ ಬ್ಯಾಂಕ್ ಚುನಾವಣೆ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ದುಂಡಶಿ ಗ್ರಾಮದಲ್ಲಿರುವ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ಎಸ್.ಜಿ. ಪಾಟೀಲ ಅವರನ್ನು ಬಹುಮತದಿಂದ ಆಯ್ಕೆ ಮಾಡಲಾಗಿತ್ತು. ಸಂಘದ ಅಧ್ಯಕ್ಷ ನಿಂಗಪ್ಪ ಗಿ. ಕೊಳೂರ ಸಹಿ ಮಾಡದೆ ಮನೆಗೆ ತೆರಳಿದ್ದರು.
ಆಮೇಲೆ, ತಮ್ಮ ಮನೆಗೆ ಠರಾವು ಪುಸ್ತಕ ಹಾಗೂ ಡೆಲಿಗೇಟ್ ಪುಸ್ತಕವನ್ನು ತರುವಂತೆ ದುಂಡಶಿ ಮುಖ್ಯ ಕಾರ್ಯನಿರ್ವಾಹಕ ಜಿ.ಪಿ. ಹಿರೇಮಠರಿಗೆ ಹೇಳಿದ್ದರು. ಪುಸ್ತಕಗಳನ್ನು ಒಯ್ದು ಕೊಟ್ಟಾಗ ಸಹಿ ಮಾಡಿ ವಾಪಸ್ ಕೊಡದೆ ಕೊಳೂರ ಅವರು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಅದನ್ನು ಮರಳಿ ನೀಡುವಂತೆ ಸಂಘಗಳ ಸಹಾಯಕ ನಿಬಂಧಕರಿಗೆ, ಕೆಸಿಸಿ ಬ್ಯಾಂಕ್ ನಿಬಂಧಕರಿಗೆ ಹಾಗೂ ತಡಸ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದುಂಡಶಿ ಸಹಕಾರಿ ಪತ್ತಿನ ಸಂಘದ ಠರಾವು ಪುಸ್ತಕ ಹಾಗೂ ಡೆಲಿಗೇಟ್ ಪುಸ್ತಕವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ. ಅದು ಒಬ್ಬರ ಸ್ವತ್ತಲ್ಲ. ಮೂರು ಗ್ರಾಮಗಳಿಗೆ ಸೇರಿದ್ದ. ಇದರಿಂದ ಅಧಿಕಾರ ದುರುಪಯೋಗ ಮಾಡಿದಂತಾಗುವುದು ಎಂದು ಗ್ರಾಮಸ್ಥರು ಆರೋಪಿಸಿದ್ದು, ತಕ್ಷಣ ಸಂಘದ ಠರಾವು ಪುಸ್ತಕ ಹಾಗೂ ಡೆಲಿಗೇಟ್ ಪುಸ್ತಕದ ಕುರಿತು ಅಧಿಕಾರಿಗಳು ತನಿಖೆ ಮಾಡಿ, ಕ್ರಮ ಜರುಗಿಬೇಕು ಎಂದು ಆಗ್ರಹಿಸಿದ್ದಾರೆ.