ಏಕೀಕರಣ ಹೋರಾಟಗಾರರ ಸ್ಮರಿಸಿ: ಬಿದರಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 4
ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರಲ್ಲಿ ಹಾವೇರಿ ಜಿಲ್ಲೆಯವರಾದ ಕೆ.ಎಫ್. ಪಾಟೀಲ, ಹೊಸಮನಿ ಸಿದ್ದಪ್ಪ, ಹಳ್ಳಿಕೇರಿ ಗುದ್ಲೆಪ್ಪ ಹಾಗೂ ಪಾಟೀಲ ಪುಟ್ಟಪ್ಪನವರ ಪಾತ್ರ ಮಹತ್ವದ್ದೆಂದು ಸಿದ್ದಾಪುರ ಲಂಬಾಣಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಬಸವರಾಜ ಬಿದರಿ ಹೇಳಿದರು.
58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗುರುತಿನ ಚೀಟಿ ಹಾಗೂ ಸಮವಸ್ತ್ರ ವಿತರಿಸಿದ ಅವರು, ರಾಜ್ಯದ ಏಕೀಕರಣಕ್ಕಾಗಿ ದುಡಿದ ಮಹನಿಯರನ್ನು ಸ್ಮರಿಸುವ ಜತೆಗೆ, ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಮಸ್ತ ಕನ್ನಡಿಗರ ರಕ್ಷಣೆಗಾಗಿ ನಾವು ಶ್ರಮಿಸಬೇಕು. ಈ ಎಚ್ಚರ ಮೂಡಿಸುವ ದಿನವೇ ರಾಜ್ಯೋತ್ಸವ ಎಂದರು.
ಸಹಶಿಕ್ಷಕ ಎನ್.ಜಿ. ಶಿರಗೇರಿ ಉಪನ್ಯಾಸ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸೇವಾಲಾಲ್ ಯುವಕ ಸಂಘದ ಸದಸ್ಯರು, ಗ್ರಾಮಸ್ಥರು, ಪಾಲಕರು, ಅಕ್ಷರ ದಾಸೋಹ ಸಿಬ್ಬಂದಿ, ಶಿಕ್ಷಕಿ ಅನಸೂಯಾ ರಾಠೋಡ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಾಳೆಯಿಂದ
ಶಿಗ್ಗಾಂವಿ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನ. 6ರಿಂದ 17ರ ವರೆಗೆ ನಡೆಯಲಿದ್ದು, ಶಾಲಾಭಿವೃದ್ಧಿ ಸಮಿತಿಗಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಬಿಆರ್ಪಿ ಎನ್.ಎಚ್. ಅದ್ವಾನಿ ಹೇಳಿದರು. ತಾಲೂಕಿನ ಕಾಮನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನೀರಲಗಿ ಕ್ಲಸ್ಟರ್ ಮಟ್ಟದ ಎಸ್ಡಿಎಂಸಿ ತರಬೇತಿ ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಜನತೆ ಸಹಕರಿಸಿದರೆ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ, ಎಲ್ಲರೂ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಪಡವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಪಿ.ಎಸ್. ಗೌಡರ, ಎಸ್.ಎಂ. ಹಾದಿಮನಿ, ಮಂಜುಳಾ ಪಾಟೀಲ್, ಬಿಆರ್ಪಿ ಟಿ.ಕೆ. ಪಾಟೀಲ, ಕ್ಲಸ್ಟರ್ನ ಪ್ರಧಾನ ಗುರುಗಳು, ಎಸ್ಡಿಎಂಸಿ ಅಧ್ಯಕ್ಷರು ಉಪಸ್ಥಿತರಿದ್ದರು. ಸಿಆರ್ಪಿ ವಿ.ಜಿ. ದುಂಡಪ್ಪನವರ ಸ್ವಾಗತಿಸಿದರು. ಎಸ್.ಎಚ್. ದಾವಣಗೆರೆ ವಂದಿಸಿದರು.
ಪರಿಹಾರಕ್ಕಾಗಿ ರೈತರ ಪಾದಯಾತ್ರೆ ನಾಳೆ
ಬ್ಯಾಡಗಿ: ಬಿಟಿ ಹತ್ತಿ ಕಳಪೆ ಬೀಜದಿಂದ ಸಂಕಷ್ಟಕ್ಕೆ ಸಿಲುಕಿದ ರೈತನ ಪರಿಹಾರಕ್ಕಾಗಿ ರಾಜ್ಯ ರೈತ ಸಂಘ, ಹಸಿರುಸೇನೆ ಮೋಟೆಬೆನ್ನೂರು ಗ್ರಾಮ ಘಟಕ ನೇತೃತ್ವದಲ್ಲಿ ನ. 6ರಂದು ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟಿಸಲು ನಿರ್ಧರಿಸಿದೆ. ಎರಡು ತಿಂಗಳಿಂದ ರೈತರ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ತಪ್ಪಿತಸ್ಥ ಬೀಜ ಕಂಪನಿಗಳ ವಿರುದ್ಧ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಬದಲಾಗಿ ಸಂಕಷ್ಟದಲ್ಲಿರುವ ರೈತನ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಹಿನ್ನೆಲೆಯಲ್ಲಿ ಮೋಟೆಬೆನ್ನೂರಿಂದ ಬ್ಯಾಡಗಿ ತಹಸೀಲ್ದಾರ್ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಬುಧವಾರ ಬೆಳಗ್ಗೆ 10ಕ್ಕೆ ಮೋಟೆಬೆನ್ನೂರು ಗ್ರಾಪಂ ಆವರಣದಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ. ಬಿಟಿ ಕಳಪೆ ಬೀಜದಿಂದ ಸಂಷ್ಟಕ್ಕೆ ಸಿಲುಕಿದ ರೈತರು ಸ್ವಯಂಪ್ರೇರಿತರಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಗ್ರಾಮ ಘಟಕಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ನೀಲಮ್ಮ ಹಿರೇಮಠ ನಿಧನ
ಶಿಗ್ಗಾಂವಿ: ತಾಲೂಕಿನ ಕುನ್ನೂರು ಗ್ರಾಮದ ನೀಲಮ್ಮ ವೀರಭದ್ರಯ್ಯ ಹಿರೇಮಠ(80) ಸೋಮವಾರ ನಿಧನರಾದರು. ಮೃತರಿಗೆ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳು ಇದ್ದಾರೆ. ತಾಲೂಕು ಜಂಗಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದ ದುಂಡಪ್ಪನವರ, ಎಸ್.ವಿ. ಹಿರೇಮಠ, ಜಿಪಂ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಪಾಟೀಲ, ವಿಎಸ್ಸೆಸ್ ಬ್ಯಾಂಕ್ ಅಧ್ಯಕ್ಷ ನೀಲಕಂಠಗೌಡ ಬ್ಯಾಹಟ್ಟಿ ಸಂತಾಪ ಸೂಚಿಸಿದ್ದಾರೆ.
ಇಂದು ಪ್ರತಿಭಟನೆ
ಶಿಗ್ಗಾಂವಿ: ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗಗಳಿಗೂ ವಿಸ್ತರಿಸುವಂತೆ ಹಾಗೂ ಎಪಿಎಲ್ ಕಾರ್ಡುದಾರರಿಗೆ 15 ಕೆಜಿ ಅಕ್ಕಿ, ಗೋದಿ ಮತ್ತು ಸೀಮೆಎಣ್ಣೆ ಕೊಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಮತ್ತು ಜಾಗೃತಿ ಸಂಘದ ಸದಸ್ಯರು ನ. 5ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಫಕ್ಕಿರೇಶ ನೇತೃತ್ವ ವಹಿಸುವರು ಎಂದು ಕಾರ್ಯದರ್ಶಿ ಮಂಜುನಾಥ ತಿ. ವಡ್ಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರ ಕಾಂಗ್ರೆಸ್ಗೆ: ಟಿ. ಈಶ್ವರ
ನರಗುಂದ: ಗದಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ ಈ ಬಾರಿ ಮತ್ತೆ ಕಾಂಗ್ರೆಸ್ ಮಡಿಲಿಗೆ ಬರುವುದು ಖಂಡಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಟಿ. ಈಶ್ವರ ಹೇಳಿದರು. ಪಟ್ಟಣದ ಆಯಿಲ್ ಮಿಲ್ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ವರ್ಷಗಳವರೆಗೆ ಪಶ್ಚಿಮ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ಎಚ್.ಕೆ. ಪಾಟೀಲ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಹಿಂದಿನ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋತರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಮೊದಲನೇ ಹಂತದಲ್ಲಿ 16 ಸಾವಿರ ಪದವೀಧರರ ಮತಗಳ ನೋಂದಣಿ ಆಗಿದೆ ಎಂದರು. ಚಂಬಣ್ಣ ವಾಳದ, ಡಾ. ಸಂತೋಷ ಯಾವಗಲ್, ಎಸ್.ಆರ್. ಪಾಟೀಲ, ವಂಕರಡ್ಡಿ ದೇವರಡ್ಡಿ, ಡಾ. ಎಲ್.ಎಚ್. ಕರಮಡಿ, ಶಿವನಗೌಡ ಹೆಬ್ಬಳ್ಳಿ, ಎಫ್.ವೈ. ದೊಡಮನಿ, ಎಂ.ಬಿ. ಅರಹುಣಸಿ, ಎಸ್.ಬಿ. ದಂಡಿನ, ಗುರುಪಾದಪ್ಪ ಕುರಹಟ್ಟಿ, ಡಿ.ಎಸ್. ಪಾಟೀಲ, ಗುರುಶಾಂತ ದೊಡ್ಡಮನಿ, ರವಿ ಯರಗಟ್ಟಿ, ರಾಮಚಂದ್ರ ಪವಾರ, ದ್ಯಾಮಣ್ಣ ಸವದತ್ತಿ ಇದ್ದರು.
ದೀಪಾವಳಿ: ಲಂಬಾಣಿ ಸಾಂಪ್ರದಾಯಿಕ ನೃತ್ಯ
ಗಜೇಂದ್ರಗಡ: ಲಂಬಾಣಿ ಮಹಿಳೆಯರು ಬಲಿಪಾಡ್ಯದಂದು ಹೊಲಗಳಿಗೆ ತೆರಳಿ ಚೆಂಡು ಹೂವು, ಹಣ್ಣಿ ಹೂವು, ಉತ್ರಾಣಿ ಗಿಡಗಳನ್ನು ತಂದು ಬಡಾವಣೆಯ ಶ್ರೀಸೇವಾಲಾಲ ಮಂದಿರದಲ್ಲಿ ಸಾಂಪ್ರದಾಯಕ ಹಾಡಿನೊಂದಿಗೆ ಹಾಡಿ ಕುಣಿದು ಕುಪ್ಪಳಿಸಿದರು. ಜನಾಂಗದ ಎಲ್ಲ ಬಂಧುಗಳ ಮನೆ ಮನೆಗೆ ತೆರಳಿ ಪುಷ್ಪಗಳನ್ನು ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಹಿಳೆಯರು ಬೆಳಗಿನ ಜಾವ ಮನೆಯ ಮುಂದಿನ ಅಂಗಳದಲ್ಲಿ ವಿವಿಧ ಬಗೆಯ ರಂಗು ರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ ಬಾಗಿಲ ಬಳಿ ಚೆಂಡು ಹೂವು ಜತೆ ಉತ್ರಾಣಿ ಕಡ್ಡಿಯಿಂದ ಮಾಡಿದ ಪಾಂಡವರ ಕುಂಡಲಿ ಪೂಜೆ ನೆರವೇರಿಸಿದರು. ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಜೋರಾಗಿತ್ತು. ಟಿವಿ, ಫ್ರಿಜ್, ವಾಹನದಂತಹ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದರು.