ಕನ್ನಡ ಜಾಗತಿಕ ಮಟ್ಟದಲ್ಲಿ ಬೆಳೆಯಲಿ: ಬಡಳ್ಳಿ
ಹಿರೇಕೆರೂರು: ಕನ್ನಡ ನಾಡು-ನುಡಿಯ ರಕ್ಷಣೆ ಜತೆಯಲ್ಲಿ ಭಾಷೆ, ಕಲೆ ಹಾಗೂ ಸಂಸ್ಕೃತಿ ಉಳಿಸಿ-ಬೆಳೆಸುವ ಮೂಲಕ ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳಸಲು ಎಲ್ಲರೂ ಶ್ರಮಿಸಬೇಕೆಂದು ಹಿರೇಕೆರೂರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಚೇರಿಯಲ್ಲಿ ಜರುಗಿದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಅವರು, ಪರ ಭಾಷಿಕರ ದಬ್ಬಾಳಿಕೆಯಿಂದ ಈ ನೆಲದಲ್ಲೇ ಕನ್ನಡ ಅಧೋಗತಿಗೆ ಸಾಗಿದ್ದು, ಕನ್ನಡಿಗರು ಗಡಿ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಕನ್ನಡ ಭಾಷೆಯ ಒಳತಿಗಾಗಿ ಸಂಘಟಿತರಾಗಿ ದುಡಿಯೋಣ ಎಂದರು.
ಕರವೇ ತಾಲೂಕಾಧ್ಯಕ್ಷ ಗಿರೀಶ ಬಾರ್ಕಿ ಅಧ್ಯಕ್ಷತೆ ವಹಿಸಿ, ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವ ದಿನವಿದು. ನಾಡು-ನುಡಿಯ ರಕ್ಷಣೆಗಾಗಿಯೇ ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸದ ಸಂಗತಿ. ಪರಭಾಷೆ ವ್ಯಾಮೋಹ ತ್ಯಜಿಸಿ, ಕನ್ನಡದತ್ತ ಒಲವು ಬೆಳೆಸಿಕೊಳ್ಳೋಣ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ ಪೂಜಾರ, ಸಹಕಾರ್ಯದರ್ಶಿ ಭರಮಪ್ಪ ನಡುವನಿಮನಿ, ತಾಲೂಕು ಉಪಾಧ್ಯಕ್ಷ ಮಂಜಪ್ಪ ಹಳ್ಳಳ್ಳಿ, ಜಿಲ್ಲಾ ಸಂಚಾಲಕ ಜಾಕೀರ ಮಕಾಂದರ, ರಟ್ಟಿಹಳ್ಳಿ ಘಟಕದ ಅಧ್ಯಕ್ಷ ಮಂಜಪ್ಪ ಮುದಿಯಪ್ಪನವರಕ, ಕರವೇ ಕಾರ್ಯಕರ್ತರಾದ ಸಂಜೀವ ಹಿತ್ಲಳ್ಳಿ, ನಾಗರಾಜ ಉಜುನಿಪುರ, ಬಸವರಾಜ ತಿಪ್ಪಣ್ಣನವರ, ವಿನಾಯಕ ದೇವರಹಳ್ಳಿ, ಶ್ರೀಕಾಂತ ಬಡಿಗೇರ, ಮಂಜುನಾಥ ಹಿರೇಮಠ, ಚಂದ್ರು ಬಡಿಗೇರ ಉಪಸ್ಥಿತರಿದ್ದರು.