ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳಪೆಬೀಜ, ಬೆಲೆಯೇರಿಕೆ ಕರಿನೆರಳು

Vishwanath S
Updated On : 5 Nov 2013, 11:25 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 4
ಬೆಲೆ ಏರಿಕೆ ನಡುವೆಯೂ ಪ್ರಸಕ್ತ ಸಾಲಿನ ದೀಪಾವಳಿ ಹಬ್ಬವನ್ನು ಸೋಮವಾರ ವಾಣಿಜ್ಯ ನಗರಿಯಲ್ಲಿ ಸಡಗರ, ಸಂಭ್ರಮ ಹಾಗೂ ಉತ್ಸಾಹದಿಂದ ಆಚರಿಸಿದರು.
ವರ್ತಕರು ತಮ್ಮ ಅಂಗಡಿಗಳಲ್ಲಿ ಹೂವು, ಹಣ್ಣು, ಕಬ್ಬು, ಬಾಳೆ, ತಳಿರು-ತೋರಣಗಳಿಂದ ಸಿಂಗರಿಸಿ, ಮಹಾಲಕ್ಷ್ಮೀ ಪೂಜೆಯನ್ನು ಭಕ್ತಿಯಿಂದ ಸಲ್ಲಿಸಿದರು. ಬಹುತೇಕ ಅಂಗಡಿಗಳು ವಿದ್ಯುದ್ದೀಪಗಳಿಂದ ಝಗಮಗಿಸುತ್ತಿದ್ದವು. ಹಬ್ಬದ ಅಂಗವಾಗಿ ಮನೆಗಳ ಮುಂಭಾಗದಲ್ಲಿ ಹಾಕಿದ್ದ ಬಣ್ಣ ಬಣ್ಣದ ರಂಗೋಲಿಗಳು ಕಣ್ಮನ ಸೆಳೆಯುತ್ತಿದ್ದವು.  ಸಾಲಾಗಿ ಹಚ್ಚಿದ ಹಣತೆಗಳಲ್ಲಿ ಹಾಗೂ ಬಗೆ ಬಗೆಯ ಬಣ್ಣದ ಆಕಾಶ ಬುಟ್ಟಿಗಳಲ್ಲಿ ಬೆಳಕು ಮಿನುಗುತ್ತಿತ್ತು.
ಕಳಪೆ ಬೀಜದ ಕರಿನೆರಳು
ಸಾಮಾನ್ಯವಾಗಿ ಕೃಷಿಕರು ಮುಂಗಾರು ಬೆಳೆಗಳಿಂದ ಬರುವ ಲಾಭವನ್ನು ಆಧರಿಸಿ ಹಬ್ಬ-ಹರಿದಿನ ಆಚರಿಸುತ್ತಾರೆ, ಪ್ರಸಕ್ತ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಸಮರ್ಪಕ ಮಳೆಯಾಗಿದ್ದರೂ ಕಳಪೆ ಹತ್ತಿ ಬೀಜ ಬಹುತೇಕ ಕೃಷಿಕರನ್ನು ತತ್ತರಿಸುವಂತೆ ಮಾಡಿದೆ. ತಾಲೂಕಿನ ರೈತ ಸಮುದಾಯದ ಮೇಲೂ ಕಳಪೆ ಬೀಜದ ಕರಿನೆರಳು ಬಿದ್ದಿದ್ದು, ಬೀಜ ಕಂಪನಿಯ ಅವಕೃಪೆಗೆ ತುತ್ತಾಗಿರುವ ರೈತರಿಗೆ ಬೆಳೆ ಬರುವ ಕುರಿತು ಅನುಮಾನ ವ್ಯಕ್ತವಾಗಿದೆ. ವಾಣಿಜ್ಯ ಬೆಳೆ ಹತ್ತಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ನೀಡುವ ಲಕ್ಷಣಗಳೇ ಕಾಣುತ್ತಿಲ್ಲ. ಉತ್ಸಾಹದಿಂದ ದೀಪಾವಳಿ ಆಚರಿಸಬೇಕಾಗಿದ್ದ ರೈತ ಸಮುದಾಯ ನಿರುತ್ಸಾಹ ತೋರಿಸಲು ಹತ್ತಿ ಬೀಜವೇ ಪ್ರಮುಖ ಕಾರಣವೆಂದರೆ ಅತಿಶಯೋಕ್ತಿಯಲ್ಲ.
ಬೆಲೆ ಏರಿಕೆ ಬಿಸಿ: ಇವೆಲ್ಲದರ ನಡುವೆ ಪೇಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದೂ ದೀಪಾವಳಿ ಹಬ್ಬ ಕಳೆಗುಂದಲು ಕಾರಣವೆನ್ನಲಾಗುತ್ತಿದೆ. ಹಬ್ಬದಾಚರಣೆಗೆ ಬೇಕಾದ ಹೂವು ಹಾಗೂ ದಿನಸಿ ವಸ್ತುಗಳು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಬೆಲೆ ಹೊಂದಿವೆ. ಹೀಗಾಗಿ ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಮನಸ್ಥಿತಿಗೆ ಬಂದ ರೈತರು, ಕೂಲಿಕಾರರು, ಸಾಮಾನ್ಯ ಜನರು ದೀಪಾವಳಿ ಹಬ್ಬವನ್ನು ಅನಿವಾರ್ಯ ಎಂಬಂತೆ ಆಚರಿಸಿದರು.
ಹಬ್ಬದ ಸಂಭ್ರಮಕ್ಕೆ ಹೋರಿ ಬೆದರಿಸಿದರು
ಹಾವೇರಿ: ದೀಪಾವಳಿ ಹಬ್ಬದ ಅಂಗವಾಗಿ ನಗರದ ಸೂಲಮಟ್ಟಿ, ಇಜಾರಿ ಲಕಮಾಪುರ ಹಾಗೂ ಹಳೂರಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ನಗರ ಪ್ರದೇಶ ಹಾಗೂ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು, ಕೊರಳಿಗೆ ಕೊಬ್ಬರಿಯಿಂದ ಮಾಡಿದ ಮಾಲೆ, ವಿವಿಧ ಬಣ್ಣಗಳಿಂದ ಮಾಡಿದ ಜೂಲಾ, ಮೈತುಂಬ ರೇಶ್ಮೆ ಬಟ್ಟೆಯಿಂದ ಮಾಡಿದ ಹೊದಿಕೆ, ಕೊಂಬುಗಳಗೆ ಕೋಡಣಸ, ಬಲೂನುಗಳಿಂದ ಅಲಂಕರಿಸಿದ ಹೋರಿಗಳನ್ನು ಸ್ಪರ್ಧೆಗೆ ತಂದಿದ್ದು ಗಮನಸೆಳೆಯಿತು.
ಸೋಮವಾರ ಬೆಳಗ್ಗೆ ಸೂಲಮಟ್ಟಿಯಲ್ಲಿ ಹಾಗೂ ನಗರದ ಹೃದಯ ಭಾಗದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಬಳಿ (ಹಳೂರು) ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಆನಂತರ ಅತ್ಯಂತ ಸಡಗರ ಸಂಭ್ರಮದಿಂದ ನಗರದ ಹೊರವಲಯದಲ್ಲಿರುವ ಇಜಾರಿ ಲಕಮಾಪುರದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಜರುಗಿತು.
ಸ್ಪರ್ಧೆಯ ರಂಗಕ್ಕೆ ಇಳಿಯುವುದಕ್ಕೂ ಮುಂಚೆ ಸೌಮ್ಯವಾಗಿರುವ ಹೋರಿಗಳು ಜನತೆ ಹಾಕಿದ ಕೇಕೆಗೆ ಮೈಮರೆತು ಹೂಂಕರಿಸುತ್ತ ಮುನ್ನುಗ್ಗುತ್ತಿರುವಾಗ ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಜತೆಗೆ, ಹೋರಿಗಳ ಕೊರಳಲ್ಲಿ ಹಾಕಿದ್ದ ಕೊಬ್ಬರಿ, ಕೋಡುಬಳೆ ಮುಂತಾದ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿ ಕೆಲವರು ಯಶಸ್ವಿಯಾದರೆ, ಇನ್ನು ಕೆಲವರು ಜಾರಿ ಬೀಳುತ್ತಿದ್ದ ನೋಟ ರೋಮಾಂಚನ ಮೂಡಿಸಿತು.
ಸೂಲಮಟ್ಟಿಯಲ್ಲಿ ಜಾವೀದ ಗಣಜೂರ ಕೊಬ್ಬಿದ ಹೋರಿಗಳ ಕೊರಳಿಗೆ ಕೈಹಾಕಿ ಕೊಬ್ಬರಿ ಮಾಲೆಗಳನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದರು. ಹೋರಿಯ ಕೊರಳಿಗೆ ಜೋತು ಬಿದ್ದು ಸುಮಾರು 150 ಮೀಟರ್ ದೂರ ಸಾಗಿದ್ದು ರೋಮಾಂಚನಗೊಳಿಸಿತು.
ಕ್ಷುಲ್ಲಕ ಕಾರಣಕ್ಕೆ ಚಕಮಕಿ
ಹಾವೇರಿ: ದೀಪಾವಳಿ ಹಬ್ಬದ ಅಂಗವಾಗಿ ಅಗಡಿ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದ ಪರಿಣಾಮ ಕೆಲಕಾಲ ಗ್ರಾಮದಲ್ಲಿ ಉದ್ನಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಎರಡು ಗುಂಪುಗಳ ಮಧ್ಯೆದ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಹಿರಿಯರು ಸ್ಥಳಕ್ಕೆ ದೌಡಾಯಿಸಿ ಯುವಕರಿಗೆ ಬುದ್ಧಿಮಾತು ಹೇಳಿ, ಪರಿಸ್ಥಿತಿ ತಿಳಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement