ಹೋರಿ ಬೆದರಿಸಿ ಖುಷಿಪಟ್ಟ ಯುವಕರು
ಹಾನಗಲ್ಲ: ದೀಪಾವಳಿ ನಿಮಿತ್ತ ಪಟ್ಟಣದಲ್ಲಿ ನಡೆದ ಜನಪದ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ರೈತರು ಹಾಗೂ ಸಾರ್ವಜನಿಕರಲ್ಲಿ ರೋಮಾಂಚನ ಉಂಟುಮಾಡಿತು.
ಇಲ್ಲಿನ ಕಮಾಟಗೇರಿಯಲ್ಲಿ ನಡೆದ ಹೋರಿ ಬೆದರಿಸುವ ಕಾರ್ಯಕ್ರಮ ಸೋಮವಾರ ಬೆಳಗ್ಗೆ 10ಕ್ಕೆ ಪ್ರಾರಂಭಗೊಂಡಿತು. ವಿವಿಧ ರಂಗುಗಳ ಝಾಲಾ ಹೊದ್ದ ಹೋರಿಗಳು ಯಾರ ಕೈಗೂ ಸಿಗದೆ ಗಾಳಿಯಲ್ಲಿ ರಭಸದಿಂದ ಓಡುತ್ತ ಪ್ರೇಕ್ಷಕರಿಗೆ ಮುದ ನೀಡಿದವು. ಕೊರಳಿಗೆ ಒಣಕೊಬ್ಬರಿಯ ಸರ, ಕೋಡುಗಳಿಗೆ ಬಣ್ಣ-ಬಣ್ಣದ ಬಲೂನು, ರಿಬ್ಬನು, ಫಲಕ, ಚಿತ್ರನಟರ, ಚಲನ ಚಿತ್ರಗಳ ಹೆಸರು ಬರೆದು ಶೃಂಗರಿಸಲಾಗಿತ್ತು. ಈ ಹೋರಿಗಳ ಮಾಲೀಕರು ತಮ್ಮ ಹೋರಿಗಳ ಎದುರಿಗೆ ಪಟಾಕಿ ಸಿಡಿಸಿ, ಹಲಗೆ ಬಾರಿಸಿ, ಯಾರ ಕೈಗೂ ಸಿಗದಂತೆ ಓಡಲು ಹುರಿದುಂಬಿಸುತ್ತಿದ್ದರು. ಇನ್ನೊಂದೆಡೆ ಈ ಹೋರಿಗಳನ್ನು ಹಿಡಿಯುವ, ಹಿಡಿದು ಕೊಬ್ಬರಿ ಹಂಚಿಕೊಳ್ಳುವ ಛಲದಲ್ಲಿ ಜೀವಭಯ ತೊರೆದು, ಹೋರಿಗಳ ಬೆನ್ನಿಗೆ ಬೀಳುತ್ತಿದ್ದ ಯುವಕರ ತಂಡದ ಸಾಹಸ ಮೈ ಜುಮ್ ಎನ್ನಿಸುವಂತಿತ್ತು. ಬೀದಿಯ ಇಕ್ಕೆಲಗಳಲ್ಲಿ ಕಟ್ಟಿದ್ದ ಬೊಂಬುಗಳ ರಕ್ಷಣಾ ಗೋಡೆಯನ್ನೂ ಹಾರಿ ಹೋರಿಗಳು ಜನರ ನಡುವೆ ಓಡಿ ಬಂದಾಗ ಜನತೆ ಕಕ್ಕಾಬಿಕ್ಕಿಯಾಗಿ ಓಡಿದ ಸಂದರ್ಭಗಳೂ ಎದುರಾದವು. ಆದರೆ ಯಾವುದೇ ಅಪಾಯ ಅಥವಾ ಜೀವಹಾನಿಯಾಗದೇ ಜಾನಪದ ಕ್ರೀಡೆಯಾದ ಹೋರಿಹಬ್ಬ ಜನರಿಗೆ ಮುದನೀಡಿತು.