ಆರಿಕಟ್ಟಿ ಶಾಲೆಗೆ ಭುವನೇಶ್ವರಿ ಭಾವಚಿತ್ರ ಕೊಡುಗೆ
ಹಿರೇಕೆರೂರು: ಸರ್ಕಾರಿ ಪ್ರಾಥಮಿಕ ಶಾಲೆಗೆ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರ ಕೊಡುಗೆ ನೀಡುವ ಮೂಲಕ ತಾಲೂಕಿನ ಆರಿಕಟ್ಟಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಭ್ರಮದಿಂದ 58ನೇ ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡದ ಅಭಿಮಾನ ಮೆರೆದರು.
ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಬಳಿಕ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಗ್ರಾಮದ ವೃತ್ತದ ಬಳಿ ಅಲಂಕರಿಸಿದ ವೇದಿಕೆ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜಸ್ತಂಭದಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಶ್ರೀಕಾಂತ ಬಡಿಗೇರ ನಾಡಧ್ವಜ ಆರೋಹಣ ಮಾಡಿದರು. ಶಾಲೆಗೆ ಭುವನೇಶ್ವರಿ ಭಾವಚಿತ್ರ ನೀಡಿ, ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು. ಕರವೇ ಉಪಾಧ್ಯಕ್ಷ ವಿನಾಯಕ ದೇವರಹಳ್ಳಿ, ಗೌರವಾಧ್ಯಕ್ಷ ಚಂದ್ರಪ್ಪ ಹಡಪದ, ಕಾರ್ಯದರ್ಶಿ ಚಂದ್ರು ಬಡಿಗೇರ, ಕಾರ್ಯಕರ್ತರಾದ ವೀರೇಶ ಹೆಡಿಯಾಲ, ಮಹೇಂದ್ರ ಪಡಪದ, ಕಲ್ಲನಗೌಡ ಕರೇಗೌಡ್ರ, ಎಚ್. ಮಲ್ಲೇಶ, ಸಿ.ಬಿ. ಹಡಪದ, ರಾಘವೇಂದ್ರ, ತಿರಕಪ್ಪ ಇದ್ದರು.