ಚಂದ್ರು ಬನ್ನಿಕೋಡ ಸ್ಮಾರಕಕ್ಕೆ ನಿವೇಶನ: ಮನವಿ
ಹಿರೇಕೆರೂರು: ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹುತಾತ್ಮರಾದ ಮಾವಿನತೋಪ ಗ್ರಾಮದ ಯುವ ಮುಖಂಡ ಚಂದ್ರು ಬನ್ನಿಕೋಡ ಅವರ ಸ್ಮಾರಕ ನಿರ್ಮಿಸಲು ಗ್ರಾಪಂ ವತಿಯಿಂದ ನಿವೇಶನ ಮಂಜೂರು ಮಾಡಬೇಕೆಂದು ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಟ್ಟಿಹಳ್ಳಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ಎಂ. ಕೊಣಸಾಲಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿದ್ದನಗೌಡ ಪಾಟೀಲ ಮಾತನಾಡಿ, ಗ್ರಾಪಂ ನಿವೇಶನ ಮಂಜೂರು ಮಾಡಿದರೆ ರೈತರ ಪರವಾಗಿ ಹೋರಾಡಿ ಹುತಾತ್ಮರಾದ ಚಂದ್ರು ಬನ್ನಿಕೋಡರಿಗೆ ಶ್ರದ್ಧಾಂಜಲಿ ಸಲ್ಲಿಸಲು ರೈತರಿಗೆ ಅನುಕೂಲವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಸುಭಾಸ ಗವಿಯಪ್ಪನವರ, ತಾಲೂಕು ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ಚಂದ್ರು ಜೀಗಿಹಳ್ಳಿ, ವಿರೂಪಾಕ್ಷಯ್ಯ ಮಠದ, ಈರಣ್ಣ ಬೆನ್ನೂರ, ಮಲ್ಲನಗೌಡ ಕೊಣ್ತಿ, ಮಾಲತೇಶ ಗಂಗೋಳ ಇದ್ದರು.