ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೇವರಗುಡ್ಡ ಯಾತ್ರಿ ನಿವಾಸಕ್ಕಿಂದು ಶಿಲಾನ್ಯಾಸ

Lingaraj Badiger
Updated On : 6 Nov 2013, 11:24 am

ಹಾವೇರಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ ಶ್ರೀ ಕ್ಷೇತ್ರ ದೇವರಗುಡ್ಡದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನ. 6ರಂದು ಬೆಳಗ್ಗೆ 11 ಗಂಟೆಗೆ ದೇವರಗುಡ್ಡದಲ್ಲಿ ಜರುಗಲಿದೆ. ಶಾಸಕ ಬಸವರಾಜ ಶಿವಣ್ಣನವರ ಶಿಲಾನ್ಯಾಸ ನೆರವೇರಿಸುವರು. ದೇವರಗುಡ್ಡ ಗ್ರಾಪಂ ಅಧ್ಯಕ್ಷ ಚಿಕ್ಕಪ್ಪ ಚೂರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಸಂಸದ ಶಿವಕುಮಾರ ಉದಾಸಿ, ಶಾಸಕ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳುವರೆಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಎಸ್.ಎಚ್. ತಿಮ್ಮೇಶಕುಮಾರ ತಿಳಿಸಿದ್ದಾರೆ.
ಆರ್ಥಿಕ ಗಣತಿ ಆರಂಭ
ಹಾವೇರಿ: ತಾಲೂಕಿನಲ್ಲಿ ನ. 1ರಿಂದ 30ರವರೆಗೆ 6ನೇ ಆರ್ಥಿಕ ಗಣತಿ ಕಾರ್ಯ ನಡೆಯಲಿದ್ದು, ಗಣತಿದಾರರು ಹಾಗೂ ಮೇಲ್ವಿಚಾರಕರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದ್ದಾರೆ. ಗೃಹ ಕೈಗಾರಿಕೆ, ಸಣ್ಣಪುಟ್ಟ ವ್ಯಾಪಾರ, ಉದ್ಯೋಗ ಹಾಗೂ ಉದ್ದಿಮೆಗಳ ಮಾಹಿತಿ ಸಂಗ್ರಹಿಸುವ ಮೂಲಕ ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ತಿಳಿಸಿದ್ದಾರೆ.
ಬೈಕ್ ಡಿಕ್ಕಿ: ಎಮ್ಮೆ ಮೇಯಿಸುತ್ತಿದ್ದಾತ ಸಾವು
ಬ್ಯಾಡಗಿ: ವೇಗವಾಗಿ ಚಲಿಸುತ್ತಿದ್ದ ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮದ್ಯಾಹ್ನ ಬಿಸಲಹಳ್ಳಿ ರಸ್ತೆಯ ಅಂದಾನಿಕೊಪ್ಪ ಗ್ರಾಮದ ಬಳಿ ನಡೆದಿದೆ. ಮೃತನನ್ನು ತಾಲೂಕಿನ ಬನ್ನಿಹಟ್ಟಿ ಗ್ರಾಮದ ತಿರಕಪ್ಪ ಬಸಪ್ಪ ಚೊಕ್ಕನಗೌಡ್ರ (55) ಎಂದು ಗುರುತಿಸಲಾಗಿದೆ. ಹಿರೇಕೆರೂರು ತಾಲೂಕು ಹಿರೇಬೂದಿಹಾಳ ಗ್ರಾಮದ ಕೃಷ್ಣಪ್ಪ ಸಿದ್ದಪ್ಪ ಗುಮ್ಮನಹಳ್ಳಿ ಎಂಬಾತ ಬೈಕ್ ಮೇಲೆ ಬ್ಯಾಡಗಿ ಪಟ್ಟಣದ ಕಡೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬ್ಯಾಡಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕ್ರಮ ಜರುಗಿದ್ದಾರೆ.
ಬಸವಣ್ಣವ್ವ ನಿಧನ
ಹಾವೇರಿ: ನಗರದ ಪುರದ ಓಣಿ ನಿವಾಸಿ ಬಸವಣ್ಣಮ್ಮ ಚನ್ನಬಸಯ್ಯ ಕಿತ್ತೂರುಮಠ (90) ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಡುತ್ತಿತ್ತು. ಅವರಿಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 10 ಗಂಟೆಗೆ ಹಾವೇರಿ ನಾಗೇಂದ್ರಮಟ್ಟಿಯ ಹೊಸಕೇರಿ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement