ನಗರಸಭೆ ನೌಕರರ ಸಂಘಕ್ಕೆ ಗುತ್ತೆಪ್ಪ ಅಧ್ಯಕ್ಷ
ರಾಣಿಬೆನ್ನೂರು: ರಾಣಿಬೆನ್ನೂರು ನಗರಸಭೆಯ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗುತ್ತೆಪ್ಪ ಕರಿಯಪ್ಪ ಮುದಿಕರಿಯಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾಗಿದ್ದ ಜಿಲ್ಲಾ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಎನ್.ಎಸ್. ಕಮ್ಮಾರ ತಿಳಿಸಿದರು. ನಗರಸಭೆಯ ಗುಡ್ಡಪ್ಪ ಸ್ಮಾರಕ ಭವನದ ಅಟ್ಟದ ಮೇಲಿರುವ ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುತ್ತೆಪ್ಪ ಮುದಿಕರಿಯಪ್ಪನವರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಗುತ್ತೆಪ್ಪ, ಸಂಘದಿಂದ ನೌಕರರಿಗೆ ಹಾಗೂ ನಿವೃತ್ತರಿಗೆ ಸೌಲಭ್ಯ ಒದಗಿಸಿ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನೌಕರರ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಯಣ್ಣ ಬಾಲಣ್ಣನವರ, ಸ್ಟೋರ್ ಕೀಪರ್ ಡಿ.ಡಿ. ಕಾಟಿ, ಆರೋಗ್ಯ ವಿಭಾಗಾಧಿಕಾರಿ ರವಿ ಕೀರ್ತಿ, ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಪೌರ ನೌಕರರಾದ ಸುಶೀಲವ್ವ ಪೂಜಾರ, ಗುತ್ತೆವ್ವ ಮ್ಯಾಗೇರಿ, ನಿರ್ದೇಶಕ ಎಸ್.ಕೆ. ರಿತ್ತಿಮಠ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.