ನಾಳೆಯಿಂದ ಕನಕಗಾನಾಮೃತ ಬಾನುಲಿ ಸರಣಿ
ಹಾವೇರಿ: ಆಕಾಶವಾಣಿ ಧಾರವಾಡ ಕೇಂದ್ರ ಕನಕದಾಸರ ಕೀರ್ತನೆಗಳನ್ನು ಆಧರಿಸಿ ಸಿದ್ಧಪಡಿಸಿರುವ 'ಕನಕ ಗಾನಾಮೃತ' ಬಾನುಲಿ ಸರಣಿಯನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರ ಮಾಡಲಿದೆ. ನ. 7ರಿಂದ ಪ್ರತಿ ಗುರುವಾರ ಮುಂಜಾನೆ 7.15ಕ್ಕೆ 13 ಕಂತುಗಳಲಿ ಪ್ರಸಾರವಾಗಲಿರುವ ಕನಕ ಗಾನಾಮೃತ ಸರಣಿಯಲ್ಲಿ ಕನಕದಾಸರ ಬದುಕು, ಸಾಹಿತ್ಯ, ತತ್ವ ಪ್ರತಿಪಾದನೆ, ಸಂಘರ್ಷ, ಸಾಮಾಜಿಕ ಸಾಮರಸ್ಯ ಕುರಿತು ಪ್ರಾತಿನಿಧಿಕ ಹಾಡುಗಳನ್ನು ಆಧರಿಸಿ ಮಾಹಿತಿ ನೀಡಲಾಗುವುದು. ಡಾ ಶ್ರೀಧರ ಹೆಗಡೆ ಭದ್ರನ್ ಈ ಸರಣಿಗೆ ಸಾಹಿತ್ಯ ಒದಗಿಸಿದ್ದು, ದಿವಾಕರ ಹೆಗಡೆ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ವೈ.ಬಸವರಾಜಪ್ಪ ತಿಳಿಸಿದ್ದಾರೆ.