ಬೇನಾಮಿ ಜಾಹೀರಾತು: ಕ್ರಮಕ್ಕೆ ಮನವಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 5
ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ಪಡೆದು ಜಾಹೀರಾತುಗಳನ್ನು ಪ್ರಕಟಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸದಸ್ಯರು ಮಂಗಳವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ, ದೀಪಾವಳಿ ಹಬ್ಬದ ವೇಳೆ ಕೇಂದ್ರ ಸರ್ಕಾರದ ಅಧಿಕೃತ ಆರ್‌ಎನ್‌ಐ ಸಂಖ್ಯೆ ಹೊಂದಿರದ ಗಿರೀಶ್ ಇಂಡಿಮಠ 'ಮೃತ್ಯುಂಜಯ' ಹೆಸರಿನಲ್ಲಿ, ಪರಶರಾಮ ಉಜನಿಕೊಪ್ಪ 'ರೆಡ್ ಚಿಲ್ಲಿ' ಹೆಸರಿನಲ್ಲಿ ಅನಧಿಕೃತವಾಗಿ ಜಾಹೀರಾತು ಪ್ರಕಟಿಸಿದ್ದಾರೆ. ಇದು ಕಾನೂನಿಗೆ ವಿರುದ್ಧ ಹಾಗೂ ಸಾರ್ವಜನಿಕರ ಹಣ ಲಪಟಾಯಿಸಲು ಸರ್ಕಾರದ ಕಣ್ಣಿಗೆ ಮಣ್ಣೆರಚುವ ಪ್ರಯತ್ನ. ಜನಪ್ರತಿನಿಧಿಗಳು ಹಾಗೂ ಪತ್ರಕರ್ತರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಬೇನಾಮಿ ಸಂಸ್ಥೆಗಳು ಯತ್ನಿಸುತ್ತಿವೆ ಎಂದು ಆರೋಪಿಸಿದರು.
ಹೋರಾಟ ಅನಿವಾರ್ಯ: ಮಾಲತೇಶ ಅರಳೀಮಟ್ಟಿ ಮಾತನಾಡಿ, ಇಂಥ ಬೇನಾಮಿ ಜಾಹೀರಾತುಗಳಿಂದ ಪತ್ರಿಕೆಗಳಿಗೆ ಹಾಗೂ ಪತ್ರಕರ್ತರಿಗೆ ನಷ್ಟವಾಗುತ್ತಿದ್ದರೂ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಬೇನಾಮಿ ಜಾಹೀರಾತು ಸಂಸ್ಥೆಗಳಿಗೆ ಕಡಿವಾಣ ಹಾಕುವಂತೆ ಎಸ್ಪಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಬಳಿಗೂ ನಿಯೋಗ ತೆರಳಿ ಮನವಿ ಸಲ್ಲಿಸುವುದಾಗಿ ಬಸವಂತಪ್ಪ ತಿಳಿಸಿದರು. ಉಪಾಧ್ಯಕ್ಷ ನಾಗರಾಜ ಗುತ್ತಲ, ಕಾರ್ಯದರ್ಶಿ ಮಾರುತಿ ಬಳ್ಳಾರಿ, ಟಿಪ್ಪುಸುಲ್ತಾನ್, ವಿರೇಶ ಚೌಕಿಮಠ, ರಾಜು ಗುತ್ತಲ, ಪರಮೇಶಪ್ಪ ಅಂಗಡಿ, ಶಿವಾನಂದ ಮಲ್ಲನಗೌಡರ, ಎಸ್.ಜಿ. ಕರ್ನೂಲ, ಸುರೇಶ ಗುತ್ತಲ ಇದ್ದರು.