ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಲ್ಪಸಂಖ್ಯಾತರ ಅಭಿವೃದ್ಧಿಗೆ ರು. 10 ಕೋಟಿ

Vishwanath S
Updated On : 7 Nov 2013, 11:21 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 6
ಜಿಲ್ಲೆಯಲ್ಲಿ ವಾಸವಾಗಿರುವ ಅಲ್ಪಸಂಖ್ಯಾತರು ಸಮಾಜ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ರು. 10 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಈ ಭಾಗದ ಮುಸ್ಲಿಂ ಬಾಂಧವರಲ್ಲಿ ಸಂತಸ ಮೂಡಿಸಿದೆ.
ಈ ವಿಶೇಷ ಅನುದಾನಕ್ಕೆ ರಾಜ್ಯದ ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳು ಮಾತ್ರ ಆಯ್ಕೆಯಾಗಿದ್ದು ವಿಶೇಷ. ಈ ಎರಡೂ ಜಿಲ್ಲೆಗಳಲ್ಲಿ ವಾಸವಾಗಿರುವ ಅಲ್ಪಸಂಖ್ಯಾತರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿರುವುದನ್ನು ಮನಗಂಡ ಸರ್ಕಾರ ತಲಾ ರು. 10 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿದೆ.
ನಗರಸಭೆಯ ಹೊಣೆಗಾರಿಕೆಯಲ್ಲಿ ಈ ಅನುದಾನ ವ್ಯಯವಾಗಲಿರುವ ಹಿನ್ನೆಲೆಯಲ್ಲಿ ಇದರ ಪ್ರಯೋಜನ ಎಲ್ಲರಿಗೂ ಸಿಗುವುದೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದ್ದು ಸುಳ್ಳಲ್ಲ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಹಾವೇರಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಬಿಡುಗಡೆಯಾಗಿದ್ದ ಅನುದಾನದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ವೇದಿಕೆ ಸಿಕ್ಕಲ್ಲೆಲ್ಲ ಆರೋಪಿಸುತ್ತಿದ್ದಾರೆ. ನಗರಸಭೆಗೆ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆಯಾಗಿಲ್ಲ ಎಂದು ಹಾಲಿ ಶಾಸಕ ರುದ್ರಪ್ಪ ಲಮಾಣಿ ನೇರವಾಗಿ ಆರೋಪಿಸಿ, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ನಗರಸಭೆ ಸರ್ಮಪಕವಾಗಿ ವಿನಿಯೋಗಿಸಲಿದೆ ಎಂಬುದಕ್ಕೆ ಖಾತ್ರಿ ಏನು ಎಂಬ ಮಾತುಗಳೂ ಜಿಲ್ಲಾದ್ಯಂತ ಕೇಳಿ ಬರಲಾರಂಭಿಸಿವೆ.
ರು. 10 ಕೋಟಿಯಲ್ಲಿ ಏನೇನು..?
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗಿರುವ ರು. 10 ಕೋಟಿ ಅನುದಾನದಲ್ಲಿ, ಸಮುದಾಯದವರಿಗೆ ಮನೆ ಕಟ್ಟಿಕೊಡುವುದು, ವೃತ್ತಿಪರ ಚಟುವಟಿಕೆ ಕೈಗೊಳ್ಳಲು ತರಬೇತಿ, ಮಹಿಳೆಯರಿಗೆ ಹೊಲಿಗೆ ತರಬೇತಿ, ಹೊಲಿಗೆ ಯಂತ್ರ ವಿತರಣೆ, ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ರಮಗಳು ಸೇರಿವೆ. ಈ ಅನುದಾನದಲ್ಲಿ ಕೇಂದ್ರ ಸರ್ಕಾರದ ಪಾಲು ಶೇ. 80, ರಾಜ್ಯ ಸರ್ಕಾರ ಹಾಗೂ ನಗರಸಭೆ ತಲಾ ಶೇ. 10ರಷ್ಟನ್ನು ನೀಡಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆಂದೇ ಇರುವ ಈ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಇನ್ನಷ್ಟು ಅನುದಾನ ನೀಡಲು ಸಿದ್ಧ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಕಮರುಲ್ ಇಸ್ಲಾಂ ಭರವಸೆ ನೀಡಿದ್ದಾರೆ.
ಎಲ್ಲವೂ ಅರ್ಧಂಬರ್ಧ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನ ಸರಿಯಾಗಿ ಬಳಕೆಯಾಗದೇ ಇರುವುದು ಕೆಲ ಪ್ರಕರಣಗಳಲ್ಲಿ ಕಂಡು ಬಂದರೆ, ಕಾಮಗಾರಿಗಳ ಗುತ್ತಿಗೆ ಪಡೆದಿದ್ದ ಕೆಲ ಗುತ್ತಿಗೆದಾರರು ಕೆಲಸ ಅರ್ಧಕ್ಕೆ ಬಿಟ್ಟು ಹೋದ ಉದಾಹರಣೆಗಳೂ ಸಾಕಷ್ಟಿವೆ. ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಹಣ ಸದ್ವಿನಿಯೋಗವಾಗಲಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಸಮಸ್ಯೆಯಾಗಿಯೇ..
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಸ್ವಚ್ಛತೆ ಕಾಣದ ಒಳಚರಂಡಿಗಳು ಎಲ್ಲೆಡೆ ಕಾಣಸಿಗುತ್ತವೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಯೂ ಕುಂಟುತ್ತ ತೆವಳುತ್ತ ಸಾಗಿದೆ. ಒಳಚರಂಡಿ ಕಾಮಗಾರಿ ಯಾವಾಗಲೋ ಮುಗಿಯಬೇಕಿತ್ತು. ಅದೂ ಪೂರ್ಣಗೊಳ್ಳದೇ ಇರುವುದು ಆಡಳಿತ ಯಂತ್ರದ ಕರ್ತವ್ಯ ದಕ್ಷತೆಗೆ ಕನ್ನಡಿ ಹಿಡಿದಂತಿದೆ.
ಹಾವೇರಿಗೆ ನಿರಂತರ ನೀರು ಪೂರೈಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ. ಇದನ್ನು ಅನುಷ್ಠಾನಕ್ಕೆ ತರಬೇಕಾದ ಮಹತ್ತರ ಜವಾಬ್ದಾರಿ ನಗರಸಭೆ ಮೇಲಿದೆ. ಈಗ ಬಿಡುಗಡೆಯಾಗಿರುವ ಅನುದಾನ ಆ ಸಮುದಾಯ ಅಭಿವೃದ್ಧಿಗಾಗಿಯೇ ವಿನಿಯೋಗವಾಗುವಂತೆ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ನಿಗಾ ವಹಿಸುವರೇ?
180 ಪುಟಗಳ ಮಾಹಿತಿ
ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರು. 10 ಕೋಟಿ ಬಿಡುಗಡೆ ಮಾಡಿದೆ. ಹಾವೇರಿ, ಕೊಪ್ಪಳ ಜಿಲ್ಲೆಗಳು ಮಾತ್ರ ಈ ಅನುದಾನಕ್ಕೆ ಒಳಪಟ್ಟಿವೆ.  ಈ ಅನುದಾನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ವಿನಿಯೋಗ ಆಗಲಿದೆ. ಕಳೆದ ಬಾರಿ ನಗರಸಭೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಭ್ರಷ್ಟಾಚಾರ ಕುರಿತಂತೆ ತನಿಖೆ ನಡೆಸಲು 180 ಪುಟಗಳ ವಿವರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದೇವೆ.
- ರುದ್ರಪ್ಪ ಲಮಾಣಿ, ಶಾಸಕ



-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement