ಕಳಪೆ ಬೀಜ: ಕೆಡಿಪಿ ಸಭೆಗೆ ರೈತರ ಅಡ್ಡಿ
ಬ್ಯಾಡಗಿ: ಕಳಪೆ ಹತ್ತಿ ಬೀಜದಿಂದ ಕಂಗೆಟ್ಟಿರುವ ರೈತರು ಬುಧವಾರ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದ ತಾಪಂ ಕೆಡಿಪಿ ಸಭೆಗೆ ನುಗ್ಗಿ ಅಡ್ಡಿಪಡಿಸಿದರು. ಅಲ್ಲದೆ, ಸಭೆಯಲ್ಲಿ ರೈತರ ಪರವಾಗಿ ನಿರ್ಣಯ ಮಂಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆಗ್ರಹಿಸಿದರು. ರಾಜ್ಯ ರೈತ ಸಂಘ, ಹಸಿರುಸೇನೆ ಮೋಟೆಬೆನ್ನೂರು ಗ್ರಾಮ ಘಟಕ ಹಮ್ಮಿಕೊಂಡಿದ್ದ ಪಾದಯಾತ್ರೆ ತಾಪಂ ಕಾರ್ಯಾಲಯ ಸಮೀಪಿಸುತ್ತಿದ್ದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಕೆಡಿಪಿ ಸಭೆಗೆ ನುಗ್ಗಿದರಲ್ಲದೆ ಸಭೆ ಸ್ಥಗಿತಗೊಳಿಸುವಂತೆ ಇಓಗೆ ತಾಕೀತು ಮಾಡಿದರು. ಕಳಪೆ ಬೀಜದಿಂದ ಸಂಕಷ್ಟಕ್ಕೊಳಗಾದ ರೈತನಿಗೆ ಸೂಕ್ತ ಪರಿಹಾರ ನೀಡದಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು. ಅಲ್ಲದೆ, ಸೂಕ್ತ ಪರಿಹಾರ ಒದಗಿಸಲು ನಿರ್ಣಯಿಸುವಂತೆ ಆಗ್ರಹಿಸಿದರು. ಕೆಲಕಾಲ ಕೆಡಿಪಿ ಸಭೆ ಸ್ಥಗಿತಗೊಂಡಿತು. ರೈತರ ಒತ್ತಡಕ್ಕೆ ಮಣಿದ ತಾಪಂ ಅಧ್ಯಕ್ಷೆ ಚಿನ್ನಮ್ಮ ಫಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಠರಾವು ಮಾಡಲು ಸ್ಥಳದಲ್ಲೇ ಇಒಗೆ ಸೂಚಿಸಿದರು. ರೈತರನ್ನು ಸಮಾಧಾನಪಡಿಸಿದ ಸಿಪಿಐ ಹಾಲಮೂರ್ತಿರಾವ್, ಪಿಎಸ್‌ಐ ಗಿರೀಶ್, ಪೊಲೀಸ್ ಸಿಬ್ಬಂದಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದರು.