ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳಪೆ ಬೀಜ: ಪರಿಹಾರಕ್ಕಾಗಿ ಪಾದಯಾತ್ರೆ

Vishwanath S
Updated On : 7 Nov 2013, 11:21 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 6
ಕಳಪೆ ಬೀಜದಿಂದ ಸಂಕಷ್ಟಕ್ಕೊಳಗಾದ ರೈತನಿಗೆ ಸೂಕ್ತ ಪರಿಹಾರ ನೀಡದಿರುವ ಸರ್ಕಾರದ ಕ್ರಮ ಖಂಡಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮೋಟೆಬೆನ್ನೂರು ಗ್ರಾಮ ಘಟಕದ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಪ್ರತಿಭಟಿಸಲಾಯಿತು.
ಪಾದಯಾತ್ರೆಯೊಂದಿಗೆ ಪ್ರತಿಭಟನೆ ಆರಂಭಿಸಿದರು ನೂರಾರು ರೈತರು ಪರಿಹಾರ ನೀಡದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ಕಳಪೆ ಗುಣಮಟ್ಟದ ಕನಕ 7351, ನಿಕ್ಕಿ, ನಿಕ್ಕಿಪ್ಲಸ್ ಹಾಗೂ ಜಾಕ್‌ಪಾಟ್ ತಳಿ ಬೀಜ ಮಾರಾಟ ಮಾಡಿ ರೈತರಿಗೆ ಮೋಸವೆಸಗಿದ ಮಹಿಕೋ ಕಂಪನಿ ವಿರುದ್ಧ ದಾರಿಯುದ್ದಕ್ಕೂ ಘೋಷಣೆ ಹಾಕಿದರು.
ತಹಸೀಲ್ದಾರ್ ಕಚೇರಿ ಎದುರು ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ಕೃಷಿ ನೀತಿಗೆ ಧಿಕ್ಕಾರ
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಎಲಿ, ಕೇಂದ್ರ ಸರ್ಕಾರ ಪ್ರಕಟಿಸಿರುವ ತಪ್ಪು ಕೃಷಿ ನೀತಿಯಿಂದ ದೇಶದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿತ್ತನೆ ಮಾಡಿದ ಶೇ. 60ರಷ್ಟು ಬೀಜಗಳು ಮೊಳಕೆಯಾದಲ್ಲಿ ಗುಣಮಟ್ಟದ ಬೀಜ ಎಂದು ಪರಿಗಣಿಸಲಾಗುತ್ತಿದೆ. ಇದರಿಂದ ಕಳಪೆ ಬೀಜ ಮಾರಾಟಕ್ಕೆ ಕೇಂದ್ರವೇ ಅಪ್ರತ್ಯಕ್ಷವಾಗಿ ಅನುಮತಿ ನೀಡಿದೆ. ಅಲ್ಲದೆ, ಕುಲಾಂತರಿ ಹೈಬ್ರೀಡ್ ಬೀಜ ಕಂಪನಿ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿದರು.
ಬಿತ್ತನೆಯಾದ ಹತ್ತಿ ಹೂವು, ಕಾಯಿಗಳನ್ನು ಬಿಡದೇ ರೈತರನ್ನು ಚಿಂತೆಗೀಡು ಮಾಡಿದ್ದು, ಅನ್ನದಾತನ ಹಿತ ಕಾಪಾಡುವಂತಹ ಬೀಜ ಕಾಯಿದೆ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿ ಜವಾಬ್ದಾರಿ ಏನು?
ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಬೀಜಗಳನ್ನು ಮಾರುಕಟ್ಟೆಗೆ ಬಿಟ್ಟಾಗ ಕಂಪನಿಗೂ ಒಂದು ಜವಾಬ್ದಾರಿ ಇರಬೇಕು. ಪರೀಕ್ಷಿಸದೇ ಬೀಜಗಳನ್ನು ಮಾರಾಟಕ್ಕೆ ತರುವುದಿಲ್ಲ ಎಂಬ ನಿಯಮ ಕಂಪನಿ ಪಾಲಿಸಿದೆಯೇ? ಇದು ರೈತರ ಮುಂದಿರುವ ಪ್ರಶ್ನೆ. ಬೆಳೆ ವೈಫಲ್ಯಕ್ಕೆ ಬೀಜವೊಂದೇ ಕಾರಣವಲ್ಲ, ಹವಾಮಾನ, ಮಳೆ ತೇವಾಂಶ ಹಾಗೂ ಕೀಟ- ಬಾಧೆಗಳ ಕುರಿತು ವಿಜ್ಞಾನಿಗಳು ನೀಡಿದ ವರದಿ ಮಾನದಂಡವೇ? ಹಾಗಿದ್ದರೆ ಅವರಿಂದಲೇ ಕೃಷಿ ಮುಂದುವರೆಸಿಕೊಳ್ಳಲಿ ಎಂದು ಸವಾಲೆಸೆದರು. ತಂತ್ರಜ್ಞಾನ ಮುಂದುವರೆದಿದ್ದರೂ ಕೃಷಿ ಅಭಿವೃದ್ಧಿಗೆ ಸಿಗದೆ ರೈತನೇ ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿದೆ ಎಂದರು.
ಹೆದ್ದಾರಿ ತಡೆಗೆ ನಿರ್ಧಾರ
ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳದೆ ಕೆಲ ವರ್ಷಗಳ ಹಿಂದೆ ಬಿಟಿ ಬೀಜವನ್ನು ತಿರಸ್ಕರಿಸಿ ರೈತ ಸಂಘ ಹೋರಾಟ ಮಾಡಿತ್ತು, ದೇಶದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಬಳಿಕ ಸ್ವಾಗತಿಸಲಾಯಿತಾದರೂ ರೈತ ಬೀಜದಲ್ಲಿ ಸ್ವಾವಲಂಬಿತನ ಕಳೆದುಕೊಂಡಿದ್ದಾನೆ. ಜೈವಿಕ ತಂತ್ರಜ್ಞಾನ ವೃದ್ಧಿಯಾದಂತೆ ಹೆಚ್ಚು ಲಾಭ ಪಡೆಯಬೇಕಾಗಿದ್ದ ರೈತರು ಎಕರೆಗೆ ರು. 60 ರಿಂದ 70 ಸಾವಿರ ನಷ್ಟ ಅನುಭವಿಸಬೇಕಾಗಿದೆ. ಎಕರೆಗೆ 10 ಕ್ವಿಂಟಲ್ ಬರಬೇಕಾದ ಹತ್ತಿ ಗಿಡದಲ್ಲಿ ಹುಡುಕಿದರೂ ಕಾಯಿಗಳಿಲ್ಲ. 15 ದಿನಗಳಲ್ಲಿ ರೈತರಿಗೆ ಸೂಕ್ತ ಪಡಿಹಾರ ದೊರೆಯದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಾಳೆಯಿಂದ ಸಮೀಕ್ಷೆ
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶಿವಶಂಕರ ನಾಯಕ್, ಕಳಪೆ ಬೀಜದ ಕುರಿತು ರೈತರಿಂದ 5648 ಅರ್ಜಿಗಳು ಸಲ್ಲಿಕೆಯಾಗಿದ್ದು, (ಅಂದಾಜು 13400 ಎಕರೆ) ನಾಳೆಯಿಂದಲೇ ಸಮೀಕ್ಷೆ ಆರಂಭಿಸಲಾಗುವುದು. 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಚಿಕ್ಕಪ್ಪ ಛತ್ರದ, ಕೆ.ವಿ. ದೊಡ್ಡಗೌಡ್ರ, ಅಶೋಕ ಅಗಡಿ, ಶಿವಪುತ್ರಪ್ಪ ಅಗಡಿ, ಮಂಜು ಬಾರ್ಕಿ, ಮಂಜು ತೋಟದ, ಶಿವಪ್ಪ ಮತ್ತೂರ, ವಿರೂಪಾಕ್ಷಪ್ಪ ಗುಡಗೂರ, ಫಕ್ಕೀರಪ್ಪ ಬಟ್ಟಲಕಟ್ಟಿ, ಕರಬಸಪ್ಪ ಪೀಠದ, ಕೊಕ್ಕರಗೊಂದಿಗೌಡ್ರ, ಶೇಖಪ್ಪ ಹಾವನೂರ, ಮಲ್ಲಯ್ಯ ಹಿರೇಮಠ, ನಿಂಗಪ್ಪ ಕರಿಸಿದ್ದಣ್ಣನವರ, ಕರಬಸಪ್ಪ ಬಳ್ಳಾರಿ, ವಿಜಯಭರತ್ ಬಳ್ಳಾರಿ, ಈರಪ್ಪ ವಟ್ಲಳ್ಳಿ, ಶಂಕ್ರಪ್ಪ ಪವಾರ, ರಮೇಶ ಕುಂಠೆ ಕರವೇ (ಪ್ರವೀಣಶೆಟ್ಟಿ ಬಣ) ಶಂಕರ ಕುಸಗೂರ, ಜಿತೇಂದ್ರ ಸುಣಗಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ ಪ್ರಕಟಿಸಿರುವ ತಪ್ಪು ಕೃಷಿ ನೀತಿಯಿಂದ ದೇಶದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿತ್ತನೆ ಮಾಡಿದ ಶೇ. 60ರಷ್ಟು ಬೀಜಗಳು ಮೊಳಕೆಯಾದಲ್ಲಿ ಗುಣಮಟ್ಟದ ಬೀಜ ಎಂದು ಪರಿಗಣಿಸಲಾಗುತ್ತಿದೆ. ಇದರಿಂದ ಕಳಪೆ ಬೀಜ ಮಾರಾಟಕ್ಕೆ ಕೇಂದ್ರವೇ ಅಪ್ರತ್ಯಕ್ಷವಾಗಿ ಅನುಮತಿ ನೀಡಿದೆ. ಅಲ್ಲದೆ, ಕುಲಾಂತರಿ ಹೈಬ್ರೀಡ್ ಬೀಜ ಕಂಪನಿ ಜೊತೆ ಕೈಜೋಡಿಸಿದೆ. ಬಿತ್ತನೆಯಾದ ಹತ್ತಿ ಹೂವು, ಕಾಯಿಗಳನ್ನು ಬಿಡದೇ ರೈತರನ್ನು ಚಿಂತೆಗೀಡು ಮಾಡಿದ್ದು, ಅನ್ನದಾತನ ಹಿತ ಕಾಪಾಡುವಂತಹ ಬೀಜ ಕಾಯಿದೆ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ.
- ಗಂಗಣ್ಣ ಎಲಿ, ಹಸಿರು ಸೇನೆ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement