ನಮೋ ಎನ್ನುತ್ತಿರುವ ಜನತೆ: ಓಲೇಕಾರ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 6
ಗುರಿಯಲ್ಲಿ ಸ್ಪಷ್ಟತೆ, ವಿಚಾರದಲ್ಲಿ ಬದ್ಧತೆ, ಅನುಷ್ಠಾನದಲ್ಲಿ ಪ್ರಾಮಾಣಿಕತೆ ಹಾಗೂ ಸಾಮರಸ್ಯದ ಚಿಂತಕರೆಂದೇ ಹೆಸರಾದ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಹುದ್ದೆಗೇರಿಸಲು ದೇಶದ ಜನತೆ ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ವಾಲ್ಮೀಕಿ ನಗರದಲ್ಲಿ ತಾಲೂಕು ಬಿಜೆಪಿ ಎಸ್ಟಿ ಘಟಕ, ಇಟಗಿ ಗ್ರಾಮ ಘಟಕ ಹಾಗೂ ವಾಲ್ಮೀಕಿ ಯುವಸೇನೆಯ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿದ ಓಲೇಕಾರ, ಗುಜರಾತ್ನಲ್ಲಿ ಮೂರು ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಯನ್ನು ಪರಿಗಣಿಸಿ ಬಿಜೆಪಿ ನರೇಂದ್ರ ಮೋದಿ ಅವರನ್ನು ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಘೋಷಣೆ ಹೊರಬಿದ್ದಲ್ಲಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಮೋದಿ ಕೇವಲ ವ್ಯಕ್ತಿಯಲ್ಲ. ಅವರು ದೈತ್ಯಶಕ್ತಿ. ಅವರು ಪ್ರಧಾನಿಯಾದರೆ ಮಾತ್ರ ದೇಶದ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ನ್ಯಾಯವಾದಿ ಶಶಿಧರ ಬಸೇನಾಯ್ಕರ, ಕೆ.ಎಚ್. ಸಂಗಾನವರ, ಹನುಮಂತಪ್ಪ ಮೀನಕಟ್ಟಿ, ಉಮೇಶ ನಲವಾಗಲ, ಹಾಲೇಶ ಓಲೇಕಾರ, ಮಂಜುನಾಥ ಕರೂರು ಸಂಘಟನೆ ಬಗ್ಗೆ ಮಾತನಾಡಿದರು. ಮಂಜಪ್ಪ ಕುಡುಪಲಿ, ನಾಗಪ್ಪ ಎಲಿಗಾರ, ಸೋಮಪ್ಪ ನಾಯ್ಕ, ಬಸವರಾಜಪ್ಪ ಬಳ್ಳಾರಿ, ಪ್ರಕಾಶ ಸಣ್ಣೇರ, ಹನುಮಂತಪ್ಪ ಅಮರಾವತಿ, ಹನುಮಂತಪ್ಪ ದಡ್ಡಳ್ಳೇರ, ವಿಕ್ರಮರಾಜ ಮರಡೇರ, ಹನುಮಂತಪ್ಪ ತಳವಾರ, ಭರಮಪ್ಪ ಹರನಗಿರಿ ಇದ್ದರು.