ಸಂಧಾನಕ್ಕೆ ಅವಕಾಶ: ನ್ಯಾ. ಬಿ.ಜಿ. ಪ್ರಮೋದ್
ಬ್ಯಾಡಗಿ: ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ (ಮೆಗಾ ಲೋಕ ಅದಾಲತ್) ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ದಿವಾಣಿ ನ್ಯಾಯಾಧೀಶ ಬಿ.ಜಿ. ಪ್ರಮೋದ ತಿಳಿಸಿದ್ದಾರೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯ ಇತ್ಯರ್ಥಗೊಳಿಸಲು ಅವಕಾಶ ಕಲ್ಪಿಸಿದೆ. ಪ್ರಕರಣಗಳ ಶೀಘ್ರ ವಿಲೇವಾರಿಗೆ ಒತ್ತು ನೀಡಿರುವ ಪ್ರಾಧಿಕಾರ ನ. 23ರ ವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಪ್ರಕರಣಗಳು ಸೌಹಾರ್ದಯುತವಾಗಿ ಬಗೆ ಹರಿದು, ಉಭಯ ಪಕ್ಷಗಾರರ ನಡವೆ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಲೋಕ ಅದಾಲತ್ ಪ್ರಕರಣ ಇತ್ಯರ್ಥಕ್ಕೆ ನೇರವಾಗಿ ಕಲಾಪಗಳಲ್ಲಿ ಪಾಲ್ಗೊಳ್ಳಬಹುದು. ವಕೀಲರು ಇರಬೇಕೆಂಬ ನಿಯಮವಿಲ್ಲ. ಸಂಧಾನಕ್ಕೆ ಅವಶ್ಯವಿರುವ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು. ಕಡಿಮೆ ಖರ್ಚಿನಲ್ಲಿ ಪ್ರಕರಣ ವಿಲೇವಾರಿ ಆಗುತ್ತದೆ. ವ್ಯಾಜ್ಯ ಪೂರ್ವ ಪ್ರಕರಣಗಳಿಗೂ ಅವಕಾಶವಿದೆ. ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕ ಮರುಪಾವತಿ ಮಾಡಲಾಗುವುದು ಎಂದರು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಫ್.ಎಂ. ಮುಳಗುಂದ ಇದ್ದರು.
ಇಂದು ಕನಕ ಜಯಂತಿ ಪೂರ್ವಭಾವಿ ಸಭೆ
ಹಾನಗಲ್ಲ: ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ನ. 20ರಂದು ಜರುಗಲಿದ್ದು, ಇದರ ಪೂರ್ವಭಾವಿ ಸಭೆ ನ. 7ರಂದು ಸಂಜೆ 4 ಗಂಟೆಗೆ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಕನಕದಾಸರ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ತೀರ್ಮಾನಿಸಿದೆ. ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಸಭೆಯ ಅಧ್ಯಕ್ಷತೆ ವಹಿಸುವರು. ಈ ಸಭೆಗೆ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು, ಗಣ್ಯರು ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ತಹಸೀಲ್ದಾರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಇಂದು ತಾಪಂ ಕೆಡಿಪಿ ಸಭೆ
ಹಿರೇಕೆರೂರು: ಹಿರೇಕೆರೂರು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನ. 7ರಂದು ಬೆಳಗ್ಗೆ 10.30ಕ್ಕೆ ತ್ರೈಮಾಸಿಕ ಕೆಡಿಪಿ ಸಭೆ ಜರುಗಲಿದೆ. ಶಾಸಕ ಯು.ಬಿ. ಬಣಕಾರ ಅಧ್ಯಕ್ಷತೆ ವಹಿಸಲಿದ್ದು, ಎಲ್ಲ ತಾಪಂ ಹಾಗೂ ಜಿಪಂ ಸದಸ್ಯರು, ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು, ಲೋಕೋಪಯೋಗಿ ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ತಮ್ಮ ವ್ಯಾಪ್ತಿಯ ಎಲ್ಲ ಶಾಖಾಧಿಕಾರಿಗಳಿಗೆ ಹಾಜರಿರುವಂತೆ ನಿರ್ದೇಶನ ನೀಡಬೇಕೆಂದು ತಾಪಂ ಇಒ ಡಿ.ಎಂ. ಜನವಾಡ ತಿಳಿಸಿದ್ದಾರೆ.
ಉಚಿತ ತರಬೇತಿಗೆ ಅರ್ಜಿ
ಹಾವೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಅರ್ಹ ನಿರುದ್ಯೋಗಿ ಮಹಿಳಾ/ಪುರುಷ ಅಭ್ಯರ್ಥಿಗಳಿಗೆ ಮೈಸೂರಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆ ಮೂಲಕ 5 ಕೋರ್ಸ್‌ಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗುವುದು. ಆಸಕ್ತರು ಹಾವೇರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ, ನ. 15ರೊಳಗೆ ಸಲ್ಲಿಸಬೇಕು ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಗೆ ದೂ. 08375-249008 ಸಂಪರ್ಕಿಸಬಹುದು.
ಕನ್ನಡ ಜಾಗೃತಿ ವೇದಿಕೆಗೆ ಆಯ್ಕೆ
ಹಾನಗಲ್ಲ: ಕನ್ನಡ ಜಾಗೃತಿ ವೇದಿಕೆಯ ಹಾನಗಲ್ಲ ತಾಲೂಕು ಅಧ್ಯಕ್ಷರಾಗಿ ಪರಶುರಾಮ ಡೂಗನವರ ಹಾಗೂ ಹಾವೇರಿ ಜಿಲ್ಲಾ ಉಪಾಧ್ಯಕ್ಷರಾಗಿ ಕೃಷ್ಣಾ ಟೋಪೋಜಿ ಆಯ್ಕೆಯಾಗಿದ್ದಾರೆ. ವೇದಿಕೆ ರಾಜ್ಯಾಧ್ಯಕ್ಷ ಕೆ. ಮಂಜುನಾಥ (ದೇವ) ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಡಮನಿ ಈ ಆಯ್ಕೆ ಮಾಡಿದ್ದು, ಕನ್ನಡ ನೆಲ, ಜಲ, ಭಾಷೆ ಮತ್ತು ರಾಜ್ಯದ ಬಗ್ಗೆ ಅಭಿಮಾನದಿಂದ ಅಭಿವೃದ್ಧಿಗೆ ಶ್ರಮಿಸಿ, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟನೆ ಬಲಪಡಿಸುವಂತೆ ನಿರ್ದೇಶಿಸಿದ್ದಾರೆ.