ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅರ್ಪಣಾ ಭಾವದಿಂದ ಬದುಕಿಗೆ ಅರ್ಥ

Vishwanath S
Updated On : 8 Nov 2013, 11:54 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 7
ವಿಶ್ವಶ್ರೇಷ್ಠ ವಚನ ಸಾಹಿತ್ಯ ಮಾನವ ಕುಲ ಒಂದೇ ಎಂದು ಸಾರಿದೆ. ಅರ್ಪಣಾ ಮನೋಭಾವದಿಂದ ಬದುಕಿಗೆ ಅರ್ಥ ಬರುತ್ತದೆ ಎಂಬ ಜಾಗೃತಿ ಜನರಲ್ಲಿ ಮೂಡಿಸಿದೆ ಎಂದು ಅರಳೇಶ್ವರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಕೆ.ಎನ್. ಗಣೇಶ ತಿಳಿಸಿದರು.
ಹಾನಗಲ್ಲಿನಲ್ಲಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ 'ವಚನಗಳ ಪ್ರಸ್ತುತತೆ' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮನದ ಭಾವಗಳಲ್ಲಿ ಶುದ್ಧತೆ ಬೇಕು. ನಾನು ಎಂಬುದು ಅಹಂಕಾರವಾದರೆ, ನಾವು ಎಂಬುದು ಸಾಮಾಜಿಕ ಸೌಖ್ಯ. ಜಾತಿ ಮತ ಪಂಥಗಳನ್ನು ಮೀರಿದ ನೈತಿಕ ಜವಾಬ್ದಾರಿಯನ್ನು ಸಾರಿದ ವಚನಕಾರರ ಪೂಜೆ ಎಂದರೆ, ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅಗಿದೆ. ವಿಶ್ವದ ಅತಿ ಹೆಚ್ಚು ಭಾಷೆಗಳಿಗೆ ತರ್ಜುಮೆಯಾದ ವಚನಗಳು ಇಡೀ ವಿಶ್ವವನ್ನೇ ಆಕರ್ಷಿಸಿವೆ. ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ಸ್ಫೂರ್ತಿ ನೀಡುವ ಶಕ್ತಿ ಅವುಗಳಿಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಿರಂಜನ ಗುಡಿ, ವಚನಗಳು ಜಾತಿ ಸೂಚಕವಲ್ಲ. ಅವು ನೀತಿ ಪ್ರಭೋದಕ. ಸರಳ ಹಾಗೂ ಓದಲು, ಹಾಡಲು ಸುಲಭವಾದ ವಚನಗಳ ಪರಿಕಲ್ಪನೆಯೇ ಒಂದು ಅಚ್ಚರಿ. ಸಾಹಿತ್ಯ ಎಲ್ಲರ ಮನ ಮುಟ್ಟಲು ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ. ಆರ್ಥಿಕ ಹಾಗೂ ಸಾಮಾಜಿಕ ಸಾಮರಸ್ಯ ಸಾರಿದ ವಚನಗಳು ಕಾರ್ಯರೂಪಕ್ಕೆ ಬರಲಿ ಎಂದರು.
ಶಿಕ್ಷಕ ಎಲ್.ಆರ್. ದೇಟೀನ ಮಾತನಾಡಿ, ದಯೆ ಹಾಗೂ ಧರ್ಮದ ಸಾರವನ್ನು ಬೋಧಿಸಿದ ವಚನಗಳು ಕಲ್ಯಾಣ ರಾಜ್ಯದ ಕನಸು ನನಸಾಗಿಸುವ ಶಕ್ತಿ ಹೊಂದಿವೆ. ಸ್ತುತಿ ನಿಂದೆಗಳಿಗೆ ಕಿವಿಗೊಡದೆ ಆತ್ಮಸ್ಥೈರ್ಯದಿಂದ ಬದುಕಲು, ಕಾಯಕ ದಾಸೋಹದ ಮೂಲಕ ಬದುಕನ್ನು ಅರ್ಥಪೂರ್ಣಗೊಳಿಸಲು ವಚನಗಳು ಪ್ರೇರಣೆ ನೀಡುತ್ತವೆ ಎಂದರು.
ಸಾಹಿತಿ ಮಾರುತಿ ಶಿಡ್ಲಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಎ.ಎಸ್. ಜಗದೀಶಪ್ಪ, ಸಿ.ಜಿ. ಪಾಟೀಲ, ಎಸ್.ವಿ. ಹೊಸಮನಿ, ಎಸ್.ವಿ. ಮಠದ, ಎಂ.ಎಸ್. ಕೊಟ್ರಣ್ಣನವರ, ಎಂ.ಎಸ್. ಅಮರದ, ಎಸ್.ಎನ್. ದೊಡ್ಡಮನಿ, ಎಸ್.ಎಸ್. ಅರಳೀಹಳ್ಳಿ, ಎಸ್.ವೈ. ಲಿಂಗಾಪುರ, ಎಸ್.ಎಚ್. ರುದ್ರಪ್ಪ, ರಾಕೇಶ ಜಿಗಳಿ, ವಿ.ಎಂ. ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement