ಕಣ್ಮುಚ್ಚಿ ಕೂತಿದ್ದೀರಾ?
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 7
ಕಾಲುಬಾಯಿ ಬೇನೆಯಿಂದ ತಾಲೂಕಿನೆಲ್ಲೆಡೆ ಜಾನುವಾರುಗಳು ಸಾವನ್ನಪ್ಪುತ್ತಿದ್ದರೂ ರೋಗ ಪ್ರತಿಬಂಧಕ ಲಸಿಕೆ ಹಾಕುವಲ್ಲಿ ಪಶುವೈದ್ಯ ಇಲಾಖೆ ವಿಫಲವಾಗಿದೆ. ಕಣ್ಣುಮುಚ್ಚಿ ಕುಳಿತಿದ್ದೀರಾ? ಎಂದು ತಾಪಂ ಅಧ್ಯಕ್ಷೆ ಚಿನ್ನಮ್ಮ ಫಾಸಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕು ಪಂಚಾಯಿತಿ ಸುವರ್ಣ ಸೌಧದಲ್ಲಿ ಜರುಗಿದ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಯಲ್ಲಿ ನಡೆಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ ನಾಗರಾಜ, ತಾಲೂಕಿನಲ್ಲಿ ಈವರೆಗೂ ಕಾಲುಬಾಯಿ ಬೇನೆಗೆ 11 ಜಾನುವಾರುಗಳು ಸಾವನ್ನಪ್ಪಿವೆ. ಪ್ರತಿ ಗ್ರಾಮದಲ್ಲೂ ಲಸಿಕೆ ಹಾಕುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಆದರೆ, ಲಸಿಕೆ ಹಾಕಿದ ಒಂದು ಜಾನುವಾರು ಬೇರೆ ಕಾರಣಕ್ಕೆ ಸಾವನ್ನಪ್ಪಿದೆ. ರೈತರಲ್ಲಿ ತಪ್ಪು ಗ್ರಹಿಕೆ ಮೂಡಿ, ಲಸಿಕೆ ಹಾಕಿಸಲು ಸಹಕರಿಸುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ದೇವರಗುಡ್ಡ, ಹಂಸಭಾವಿ ಹಾಗೂ ರಾಣಿಬೆನ್ನೂರು ಜಾನುವಾರು ಸಂತೆಗಳಲ್ಲಿ ರೈತರು ಖರೀದಿ ಮಾಡಿರುವ ಸೀಮೀ ತಳಿ ದನಗಳಲ್ಲಿ ಕಾಲುಬಾಯಿ ಬೇನೆ ಹೆಚ್ಚು. ಈ ಕುರಿತು ರೈತರಲ್ಲಿ ಅರಿವು ಮೂಡಿಸುತ್ತಿರುವುದಾಗಿ ಸಭೆಗೆ ತಿಳಿಸಿದರು.
ಉದ್ಘಾಟಿಸದೆ ಹಸ್ತಾಂತರ: ಕುಮ್ಮೂರ ಗ್ರಾಮದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸದೇ ಹಸ್ತಾಂತರ ಮಾಡಿ ಕೊಳ್ಳಲಾಗಿದೆ. ಮಕ್ಕಳ ದೃಷ್ಟಿಯಿಂದ ಇದು ಸರಿ ಎನಿಸಿದರೂ ನಿಯಮದಂತೆ ಉದ್ಘಾಟನೆ ಆಗಲೇಬೇಕು. ಇದಕ್ಕೆ ಸ್ಪಷ್ಟನೆ ನೀಡಿ. ಯಾವ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ, ಅಪೌಷ್ಟಿಕ ಮಕ್ಕಳ ಸಂಖ್ಯೆ ಎಷ್ಟು ಎಂದು ಟಿಈಓ ಎಸ್.ಆರ್. ಪಾಟೀಲರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ. ಶಿರೋಳಕರ ಅವರನ್ನು ಪ್ರಶ್ನಿಸಿದರು.
ಮಾಹಿತಿ ನೀಡಲು ಶಿರೋಳಕರ ತಡಕಾಡಿದ್ದನ್ನು ಕಂಡ ಟಿಈಓ, ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡುವುದು ಸರಿಯಲ್ಲ. ಈ ಹಿಂದೆಯೂ ಯಾವುದೇ ಮಾಹಿತಿ ಇಲ್ಲದೆ ಸಭೆಯಲ್ಲಿ ಪಾಲ್ಗೊಂಡಿದ್ದೀರಿ. ಮುಂದಿನ ಸಭೆಗಳಲ್ಲಿ ಸರಿಯಾದ ಮಾಹಿತಿಯೊಂದಿಗೆ ಬನ್ನಿ ಎಂದು ತಾಕೀತು ಮಾಡಿದರು. ಅಂಗವಾಡಿಗಳಿಗೆ ಕಟ್ಟಡ ಅಥವಾ ಸ್ಥಳದ ಕೊರತೆಯಿದ್ದರೆ ತಾಪಂ ಗಮನಕ್ಕೆ ತರುವಂತೆ ಸೂಚಿಸಿದರು.
ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಮಾತನಾಡಿ, ಗ್ರಾಪಂ ನಿವೇಶನಗಳಲ್ಲಿ ಎಪಿಎಂಸಿ ನಿರ್ಮಿಸಿರುವ ಉಗ್ರಾಣಗಳ ನಿರ್ವಹಣೆಯನ್ನು ಇತ್ತೀಚೆಗೆ ಗ್ರಾಪಂಗಳಿಗೆ ಬದಲಾಗಿ ವ್ಯವಸಾಯೋತ್ಪನ್ನ ಸಹಕಾರಿ ಸಂಘಗಳಿಗೆ ನೀಡಲಾಗುತ್ತಿದೆ. ಕೂಡಲೇ ಉಗ್ರಾಣಗಳನ್ನು ಗ್ರಾಪಂಗಳಿಗೆ ಬಿಟ್ಟುಕೊಡುವ ಮೂಲಕ ಆದಾಯ ಆಯಾ ಗ್ರಾಪಂಗೆ ಸೇರುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ್ಯದರ್ಶಿ ಬಿ.ಎಸ್. ಗೌಡರ, ಎಲ್ಲ ಉಗ್ರಾಣಗಳನ್ನು ಹಸ್ತಾಂತರಿಸಿಲ್ಲ. ಹಿಂದಿನ ಸರ್ಕಾರದಲ್ಲಿದ್ದ ಸಹಕಾರಿ ಸಚಿವರ ಆದೇಶದ ಮೇರೆಗೆ ಇತ್ತೀಚೆಗೆ ನಿರ್ಮಿಸಲಾದ ಕೆಲ ಉಗ್ರಾಣಗಳನ್ನು ಮಾತ್ರ ವಿಎಸ್‌ಎಸ್‌ಗಳಿಗೆ ಹಸ್ತಾಂತರಿಸಲಾಗಿದ್ದು, ಇದರಲ್ಲಿ ಕೃಷಿ ಮಾರಾಟ ಇಲಾಖೆ ವೈಯಕ್ತಿಕ ಹಿತಾಸಕ್ತಿ ಇಲ್ಲವೆಂದು ಸಭೆಗೆ ಸ್ಪಷ್ಟನೆ ನೀಡಿದರು.
ಬಿಸಿ ನೀರು ಕೊಡಿ: ಶಾಲಾ ಮಕ್ಕಳಿಗೆ ಕುಡಿಯಲು ಕಡ್ಡಾಯವಾಗಿ ಕಾಯಿಸಿ ಆರಿಸಿದ ನೀರನ್ನೇ ಕೊಡಬೇಕು ಆದರೆ ಕೆಲ ಶಾಲೆಗಳಲ್ಲಿ ಬಿಸಿನೀರು ಕೊಡುತ್ತಿಲ್ಲವೆಂಬ ಮಾಹಿತಿ ಲಭ್ಯವಾಗಿದೆ ಎಂದು ಟಿಈಓ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಎಲ್ಲ ಶಾಲೆಗಳಲ್ಲೂ ಬಿಸಿನೀರು ಒದಗಿಸಲಾಗುತ್ತಿದೆ. ಆದರೂ ಮತ್ತೊಮ್ಮೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡದೆ, ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತೆ ಚೀಟಿಗಳನ್ನು ನೀಡುತ್ತಿರುವುದಾಗಿ ಸಾರ್ವಜನಿಕರು ದೂರು ನೀಡಿದ್ದು, ಸೂಕ್ತ ಮಾಹಿತಿ ನೀಡುವಂತೆ ಟಿಈಓ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ ಲಮಾಣಿ, ಸ್ಥಳೀಯವಾಗಿ ಕೆಲ ಚಿಕಿತ್ಸೆಗಳು ಲಭ್ಯವಿರದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿರಬಹುದು ಎಂದರು.