ನೃತ್ಯ-ನಿನಾದದಿಂದ ಮನಗೆದ್ದ ಕಲಾಸೌರಭ
ಹಾವೇರಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಜ್ಯೋತ್ಸವದ ಅಂಗವಾಗಿ ನಗರದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ 'ಕಲಾ ಸೌರಭ' ಜನಮನ ಸೂರೆಗೊಂಡಿತು. ಬಾಲ ಕಲಾವಿದರಾದ ಪ್ರಿಯಂಕಾ ಕಾಶೆಟ್ಟಿ, ಸಂಜನಾ ಜೋಶಿ, ವಿದ್ಯಾ ನರಗುಂದ, ದಿವ್ಯಾ ನಾಯ್ಕ ಭರತನಾಟ್ಯ ಅಮೋಘವಾಗಿತ್ತು. ಬಳಿಕ ಹುಬ್ಬಳಿಯ ಪಂ. ಶ್ರೀನಿವಾಸ ಜೋಶಿ (ಸಿತಾರ್), ಶಿಗ್ಗಾಂವಿಯ ಹನುಮಂತಪ್ಪ ಕಾಮನಹಳ್ಳಿ (ವಯೋಲಿನ್), ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಬಸವರಾಜ ಭಜಂತ್ರಿ ಹೆಡ್ಡಿಗೊಂಡ (ಶಹನಾಯಿ ವಾದಕ) ಹಾಗೂ ಹುಬ್ಬಳಿಯ ಆದಿತ್ಯ ಕುಲಕರ್ಣಿ (ಕೊಳಲು) ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಧಾರವಾಡದ ಪಂ. ಬಾಲಚಂದ್ರ ನಾಕೋಡ, ಹುಬ್ಬಳ್ಳಿಯ ರೇಖಾ ಹೆಗಡೆ ಹಾಗೂ ಆಕಾಶವಾಣಿ ಕಲಾವಿದೆ ಹಾವೇರಿಯ ಭಾಗ್ಯವತಿ ಕೋಡಬಾಳ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಮಾಲತೇಶ ಕಣವಿ ಅವರ ಜಾನಪದ ಗೀತೆ ಮಧುರವಾಗಿದ್ದವು. ಗದುಗಿನ ಶಹಜಾನ ಮುದಕವಿ ತಂಡದಿಂದ ಜಾನಪದ ನೃತ್ಯ, ಪೃಥ್ವಿ ಶಿರೂರ ನೃತ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜ್ಯೂನಿಯರ್ ರಾಜಕುಮಾರ ತಂಡದ ರಸಮಂಜರಿ ಬಹುಕಾಲ ನೆನಪಿನಲ್ಲಿ ಉಳಿಯುವಂತಿದ್ದವು.
- ಚಿತ್ರಗಳು: ಸಂಜಯ ರಿತ್ತಿ