ರು. 4 ಲಕ್ಷ ವೆಚ್ಚದಲ್ಲಿ ಕುಡುಪಲಿ ಬಸ್ ತಂಗುದಾಣ: ಬಣಕಾರ
ಹಿರೇಕೆರೂರ: ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರು. 42 ಲಕ್ಷ ಅನುದಾನ ಮಂಜೂರಾಗಿದ್ದು, ಈ ಪೈಕಿ ರು. 4 ಲಕ್ಷ ವೆಚ್ಚದಲ್ಲಿ ಕುಡುಪಲಿ ಗ್ರಾಮದ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ಕುಡುಪಲಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ, ಬಸ್ ತಂಗುದಾಣದ ನಿವೇಶನ ಪರಿಶೀಲಿಸಿದ ಅವರು, ಗ್ರಾಮದ ಹೊರವಲಯದಲ್ಲಿರುವ ಮರಡಿ ತಿಮ್ಮಪ್ಪ ದೇವರ ದೇವಸ್ಥಾನದ ಸುತ್ತ ಕಾಂಕ್ರೀಟ್ ಹಾಕುವ ಸಲುವಾಗಿ ರು. 3 ಲಕ್ಷ, ಕುಡುಪಲಿ-ರಟ್ಟಿಹಳ್ಳಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಅರಂಭಿಸಲಾಗುವುದು. ಮಾದಾಪುರ ಗ್ರಾಮದ ಎಸ್ಸಿ ಕಾಲನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ರು. 6 ಲಕ್ಷ ಮಂಜೂರಾಗಿದೆ. ದಿನಾಂಕ ಗುರುತಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ವಿನೋದಮ್ಮ ಹೊಂಕಣದ, ಉಪಾಧ್ಯಕ್ಷೆ ಶಾರದಮ್ಮ ಚಲುವಾದಿ ಎಪಿಎಂಸಿ ಉಪಾಧ್ಯಕ್ಷ ನಾಗರಾಜ ಬೆನಕಣ್ಣನವರ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಹೇಶಪ್ಪ ನೆಶ್ವಿ, ಮರೆಡಪ್ಪ ಚೌಡಕ್ಕನವರ, ರಾಮನಗೌಡ ಮರಿಗೌಡ, ಗ್ರಾಮಸ್ಥರಾದ ಎಚ್.ಎನ್. ಮರಾಠಾ, ಶಿವಶಂಕರ ಕುಸಗೂರ, ರಾಜು ಉಜ್ಜಪ್ನವರ, ಗೌಸುಸಾಬ ದೊಡ್ಮನಿ, ಗ್ರಾಪಂ ಸದಸ್ಯರು, ಕೆಜೆಪಿ ಕಾರ್ಯಕರ್ತರು ಇದ್ದರು.