ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ನೆರವಾಗಿ
ಹಾನಗಲ್ಲ: ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ, ಅವರ ಕಲಿಕೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಮನವಿ ಮಾಡಿದ್ದಾರೆ.
ಶಾಲಾ ಹಂತದ ಸಮೀಕ್ಷೆಯನ್ನು ನ. 6 ಮತ್ತು 7ರಂದು, ಕುಟುಂಬ ಸಮೀಕ್ಷಾ ಕಾರ್ಯವನ್ನು ನ. 13ರಿಂದ 17ರ ವರೆಗೆ ಮಾಡಲಾಗುತ್ತಿದೆ. ತಾಲೂಕಿನ 19 ಕ್ಲಸ್ಟರ್ಗಳಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಎಂಡಿಆರ್ಎಸ್, ಕಿತ್ತೂರು ರಾಣಿ ಚನ್ನಮ್ಮ, ನವೋದಯ ಸೇರಿ ಒಟ್ಟು 316 ಶಾಲೆಗಳಿಂದ ಮಾಹಿತಿ ಪಡೆಯಲಾಗುವುದು. 45,600 ಕುಟುಂಬಗಳ ಸಮೀಕ್ಷೆ ಮಾಡಲಾಗುವುದು. ಈ ಕಾರ್ಯಕ್ಕಾಗಿ 1400 ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಒಂದು ಸಮೀಕ್ಷಾ ತಂಡದಲ್ಲಿ ಶಿಕ್ಷಣ ಇಲಾಖೆಯ ಇಬ್ಬರು, ಬೇರೆ ಇಲಾಖೆಯ ಒಬ್ಬರು ಸಿಬ್ಬಂದಿ ಹಾಗೂ ಓರ್ವ ಎನ್ಜಿಒ ಪ್ರತಿನಿಧಿ ಸೇರಿ 4 ಜನರಿರುತ್ತಾರೆ.
10 ತಂಡಕ್ಕೆ ಒಬ್ಬರು ಪ್ರೌಢಶಾಲಾ ಸಹಶಿಕ್ಷಕರನ್ನು ಮೇಲ್ವಿಚಾರಕರಾಗಿ, ಕ್ಲಸ್ಟರ್ಗೆ ಒಬ್ಬ ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಕ್ಲಸ್ಟರ್ ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ. ಎರಡು ಕ್ಲಸ್ಟರ್ಗಳಿಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಆಯಾ ದಿನವೇ ಗಣಕೀಕರಣ ಮಾಡಿ, ಜಿಲ್ಲಾ ಮತ್ತು ರಾಜ್ಯ ಹಂತಕ್ಕೆ ರವಾನೆ ಮಾಡಲಾಗುವುದು. ಇದಕ್ಕೆ ಬೇಕಾದ ಕಂಪ್ಯೂಟರ್ ಹಾಗೂ ತಂತ್ರಜ್ಞರನ್ನು ನಿಯೋಜಿಸಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಗಣತಿಗೆ ಸಹಕರಿಸಿ: ಚಲವಾದಿ ಮನವಿ
ಹಾನಗಲ್ಲ: ಪ್ರತಿ ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಕರೆತರಲು ನ. 6ರಿಂದ 17ರ ವರೆಗೆ ಮಕ್ಕಳ ಸಮೀಕ್ಷೆ ಮತ್ತು ಕುಟುಂಬ ಗಣತಿ ಕಾರ್ಯ ನಡೆಸುತ್ತಿದೆ. ಸಾರ್ವಜನಿಕರು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಆರಳೇಶ್ವರ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಪಿ.ಎಂ. ಚಲವಾದಿ ಮನವಿ ಮಾಡಿದರು.
ತಾಲೂಕಿನ ಅರಳೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಷಸ್ಟರ್ ಮಟ್ಟದ ಗಣತಿದಾರರು ಮತ್ತು ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಶಾಲೆ ಬಿಟ್ಟ ಹಾಗೂ ಶಾಲೆಗೆ ಸೇರದ ಮಕ್ಕಳ ಕುರಿತು ಮಾಹಿತಿಯನ್ನು ಸಮೀಕ್ಷೆದಾರರು ಹಾಗೂ ಗಣತಿದಾರರಿಗೆ ನೀಡಬೇಕೆಂದು ತಿಳಿಸಿದರು. ಅರಳೇಶ್ವರ ಶಾಲೆಯ ಮುಖ್ಯಗುರು ವೈ.ಡಿ. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ. ದೊಡ್ಡಮನಿ, ಟಿ. ಶಿವಕುಮಾರ್, ಜೆ.ಎಸ್. ಶಿಡ್ಲಾಪುರ, ಆರ್. ಕೂಗಲ್, ಅನಿಲ್ ಕುಮಾರ್ ಗೋಣ್ಣೆಣ್ಣನವರ್, ಪ್ರಭಾ ಪಾಂಡುರಂಗ, ಎ.ಎಫ್. ಕೋನಿಸಾಗರ್, ಕೆ.ಎಸ್. ಗಾಯತ್ರಿ ಇದ್ದರು.