ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳಪೆ ಹತ್ತಿ ಬೀಜ: ಪರಿಹಾರ ಕೊಡಿ

Vishwanath S
Updated On : 9 Nov 2013, 11:56 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 8
ಜಿಲ್ಲೆಯಲ್ಲಿ ವಿವಿಧ ಕಂಪನಿಗಳು ಮಾರಾಟ ಮಾಡಿರುವ ಕಳಪೆ ಗುಣಮಟ್ಟದ ಹತ್ತಿ ಬೀಜಗಳಿಂದ ಹಾನಿಗೊಳಗಾದ ರೈತರ ಪ್ರತಿ ಎಕರೆಗೆ ಕನಿಷ್ಠ ರು. 50 ಸಾವಿರ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದರು.
ಕಳಪೆ ಹತ್ತಿ ಬೀಜ ಬಿತ್ತಿ, ಬೆಳೆ ಬಾರದೆ ನಷ್ಟ ಅನುಭವಿಸಿದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ರೈತರು ಈ ಬೇಡಿಕೆ ಮಂಡಿಸಿದ್ದಾರೆ.
ಕಳಪೆ ಗುಣಮಟ್ಟದ ಮೆಕ್ಕೆಜೋಳ ಹಾಗೂ ಹತ್ತಿ ಬೀಜಗಳ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಬೆಳೆಹಾನಿಗೆ ಎಕರೆಗೆ ಕನಿಷ್ಠ ರು. 50 ಸಾವಿರ ಪರಿಹಾರ ಕೊಡಿಸಬೇಕು ಎಂಬ ಒತ್ತಾಯದ ಧ್ವನಿ ಕೇಳಿಬಂತು.
ಸರ್ಕಾರದ ಆದೇಶದ ಪ್ರಕಾರ ರೈತರ ಹತ್ತಿ ಹೊಲಗಳಿಗೆ ತೆರಳಿ ಈ ತಿಂಗಳ ಒಳಗಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ಕೃಷಿ ಸಚಿವರ ಮೇಲೆ ಒತ್ತಡ ತಂದು ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ. ರೈತರ ಯಾವುದೇ ಸಮಸ್ಯೆಗಳಿದ್ದರೂ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ, ಚರ್ಚಿಸಬೇಕು. ರೈತರ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಪರಿಹಾರ ಕಲ್ಪಿಸಲು ಕಂಕಣಬದ್ಧರಾಗಿದ್ದೇವೆ ಎಂದು ಜಿಲ್ಲೆಯ ಶಾಸಕರು ಭರವಸೆ ನೀಡಿದರು.
ಸಮೀಕ್ಷೆ ಆಧರಿಸಿ ಪರಿಹಾರ ಕೊಡಿ: ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಮಹಿಕೋ ಕಂಪನಿ ಕಳಪೆ ಗುಣಮಟ್ಟದ ಕನಕ ಬಿಟಿ ಹತ್ತಿ ಬೀಜ ವಿತರಿಸಿ ರೈತರನ್ನು ವಂಚಿಸಿದೆ. ಪರಿಹಾರ ಕಂಡುಕೊಳ್ಳಲು ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಾಧ್ಯವಾಗುತ್ತಿಲ್ಲ. ಸಮೀಕ್ಷಾ ತಂಡಗಳು ಎಲ್ಲ ರೈತರ ಹೊಲಗಳಿಗೆ ಭೇಟಿ ನೀಡಬೇಕು. ಕಳಪೆ ಬೀಜ ವಿತರಿಸುವ ಕಂಪನಿಗಳಿಗೆ ಕಡಿವಾಣ ಹಾಕಬೇಕು. ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಸಮೀಕ್ಷೆಯ ವರದಿ ಆಧರಿಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನೈಜ ಸಮೀಕ್ಷೆ ಆಗಲಿ
ಶಾಸಕ ಯು.ಬಿ. ಬಣಕಾರ ಮಾತನಾಡಿ, ಜಿಲ್ಲೆಯಲ್ಲಿ ವಿತರಣೆಯಾಗಿರುವ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಬೀಜ ಮಸೂದೆಯಲ್ಲಿ ತೊಡಕುಗಳಿದ್ದು, ಇದಕ್ಕೆ ತಿದ್ದುಪಡಿ ಮಾಡಿ ರೈತರ ಸಮಸ್ಯೆ ಪರಿಹರಿಸಬೇಕು. ಹತ್ತಿ ಬೆಳೆ ಬಗ್ಗೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲು ಆದೇಶಿಸಿದೆ. ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ಸಮೀಕ್ಷೆ ನಡೆಸಿ ಸಕಾಲಕ್ಕೆ ವರದಿ ಸಲ್ಲಿಸಬೇಕು. ಸಮೀಕ್ಷೆ ಆಧಾರದ ಮೇಲೆ ರೈತರಿಗೆ ಪರಿಹಾರ ನೀಡಬೇಕು. ಕಳಪೆ ಗುಣಮಟ್ಟದ ಬೀಜಗಳನ್ನು ವಿತರಿಸಿದ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.
ಪರಿಹಾರದ ಭರವಸೆಯಿಲ್ಲ
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯ ಮಟ್ಟದಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಕೃಷಿ ವಿವಿ ವಿಜ್ಞಾನಿಗಳು, ಕೃಷಿ ಇಲಾಖೆ ಹಾಗೂ ಮಹಿಕೋ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈತರಿಗೆ ಪರಿಹಾರ ನೀಡಲು ಕೈಗೊಂಡಿರುವ ತೀರ್ಮಾನಗಳನ್ನು ಅವಲೋಕಿಸಿದರೆ ಯಾವ ರೈತರಿಗೂ ಪರಿಹಾರ ಸಿಗುವ ಭರವಸೆ ಇಲ್ಲ ಎಂದು ಆರೋಪಿಸಿದರು.
ಶಾಸಕ ಮನೋಹರ ತಹಶೀಲ್ದಾರ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡ ತೀರ್ಮಾನಗಳಲ್ಲಿ ಕಳಪೆ ಬೀಜಗಳ ಮಾರಾಟದ ಬಗ್ಗೆ ಪ್ರಸ್ತಾಪ ಇಲ್ಲ. ಸರ್ಕಾರ ಕಳಪೆ ಬೀಜಗಳ ಬಗ್ಗೆ ಖಚಿತಪಡಿಸಿ ಕಂಪನಿಗಳಿಂದ ಪರಿಹಾರ ಕೊಡಿಸಲು ಪ್ರಯತ್ನಿಸಬೇಕು ಎಂದರು.
ಶಾಸಕ ಕೆ.ಬಿ. ಕೋಳಿವಾಡ ಮಾತನಾಡಿ, ರೈತರು ಬೆಳೆದ ಫಸಲಿಗೆ ರೈತರೇ ಬೆಲೆ ನಿಗದಿ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದರು.
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸಿಮಗೌಡ್ರ, ಧಾರವಾರ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಜಿಪಂ ಸಿಇಒ ಉಮೇಶ ಕುಸಗಲ್ಲ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ರೈತ ಮುಖಂಡರಾದ ಗಂಗಣ್ಣ ಎಲಿ, ಮಹೇಶ ಕೊಟ್ಟೂರು, ಬಸನಗೌಡ ಗಂಗಪ್ಪಳ್ಳವರ, ಸೋಮಣ್ಣ ಚಪ್ಪರದಹಳ್ಳಿ, ಮಲ್ಲಿಕಾರ್ಜುನ ಬಳ್ಳಾರಿ ಇದ್ದರು.
ಜಿಲ್ಲೆಯಲ್ಲಿ ವಿತರಣೆಯಾಗಿರುವ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಬೀಜ ಮಸೂದೆಯಲ್ಲಿ ತೊಡಕುಗಳಿದ್ದು, ಇದಕ್ಕೆ ತಿದ್ದುಪಡಿ ಮಾಡಿ ರೈತರ ಸಮಸ್ಯೆ ಪರಿಹರಿಸಬೇಕು. ಹತ್ತಿ ಬೆಳೆ ಬಗ್ಗೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲು ಆದೇಶಿಸಿದೆ. ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ಸಮೀಕ್ಷೆ ನಡೆಸಿ ಸಕಾಲಕ್ಕೆ ವರದಿ ಸಲ್ಲಿಸಬೇಕು. ಸಮೀಕ್ಷೆ ಆಧಾರದ ಮೇಲೆ ರೈತರಿಗೆ ಪರಿಹಾರ ನೀಡಬೇಕು. ಕಳಪೆ ಗುಣಮಟ್ಟದ ಬೀಜಗಳನ್ನು ವಿತರಿಸಿದ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರ ತೆರೆಯಬೇಕು.
 ಯು.ಬಿ. ಬಣಕಾರ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement