ನಿರುದ್ಯೋಗ ನಿವಾರಣೆಗೆ ಯತ್ನ: ಈಶ್ವರ್
ಹಾವೇರಿ: ಬಹುತೇಕ ಪದವೀಧರರಿಗೆ ಆ ಪದವಿ ಜತೆಗೆ ನಿರುದ್ಯೋಗ ಎಂಬ ಪದವೂ ಅಂಟಿಕೊಂಡಿದೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಪದವೀಧರ ಒಕ್ಕೂಟ ಆರಂಭಿಸಲಾಗಿದ್ದು, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೂ ಸದಸ್ಯತ್ವ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದು ಒಕ್ಕೂಟ ಹಾಗೂ ಕಾಂಗ್ರೆಸ್ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಟಿ. ಈಶ್ವರ ತಿಳಿಸಿದರು.
ಇಲ್ಲಿಯ ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದ ನಾಲ್ಕು ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿಯಲ್ಲಿ ಪದವೀಧರ ಮತದಾರರ ಸದಸ್ಯತ್ವ ನೋಂದಣಿ ಕಾರ್ಯದ 1ನೇ ಹಂತ ಮುಕ್ತಾಯವಾಗಿದೆ. ಸುಮಾರು 34 ಸಾವಿರ ಸದಸ್ಯರ ನೋಂದಣಿಯಾಗಿದ್ದು, 2ನೇ ಹಂತದ ನೋಂದಣಿಗೆ ನ. 15 ಕೊನೆಯ ದಿನಾಂಕ ಎಂದು ಚುನಾವಣಾ ಆಯೋಗ ನಿಗದಿಮಾಡಿದೆ. ಈ ಅವಧಿಯಲ್ಲಿ 4 ಸಾವಿರ ಜನರ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಆಮೇಲೂ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರವನ್ನು 25 ವರ್ಷಗಳ ಕಾಲ ಕಾಂಗ್ರೆಸ್ ಪ್ರತಿನಿಧಿಸಿದೆ. ಎಚ್.ಕೆ. ಪಾಟೀಲರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸಿ, ಯುವಕರ ದಾರಿ ತಪ್ಪಿಸಿದ್ದರಿಂದ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿತು. ಬಿಜೆಪಿಯಿಂದ ಆಯ್ಕೆಯಾದ ಮೋಹನ ಲಿಂಬಿಕಾಯಿ ಕೆಜೆಪಿಗೆ ಹೋಗಿ, ಬಿಜೆಪಿಗೆ ಮರಳಿ, ಪದವೀಧರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ಈ ಬಾರಿ ಪ್ರಜ್ಞಾವಂತ ಪದವೀಧರ ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ತಾವೂ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು, ಈ ನಿಟ್ಟಿನಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ ಎಂದರು.
ಮುಖಂಡರಾದ ಸತೀಶ ದೇಶಪಾಂಡೆ, ತಿಪ್ಪೇಸ್ವಾಮಿ ಹೊಸಮನಿ, ಸಿ.ಜಿ. ಚೂರಿ, ಬಸವರಾಜ ಬೆಟಗೇರಿ, ಬಸವರಾಜ ಇದ್ದರು.