ಬಾಕಿ ಪ್ರಕರಣ ವಿಲೇವಾರಿಗೆ ಅವಕಾಶ: ನ್ಯಾ. ಕೋರ್ಪಡೆ
ರಾಣಿಬೆನ್ನೂರು: ಇತ್ಯರ್ಥಗೊಳ್ಳಲು ಬಾಕಿ ಇರುವ ಮೊಕದ್ದಮೆಗಳನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಜನತಾ ನ್ಯಾಯಾಲಯದ ಮೂಲಕ ವಿಲೇವಾರಿ ಮಾಡಲು ನಿರ್ಧರಿಸಲಾಗಿದ್ದು, ಸಂಧಾನಕ್ಕೆ ನ. 23ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ದಿವಾಣಿ ನ್ಯಾಯಾಧೀಶ ಎನ್.ಪಿ. ಕೋರ್ಪಡೆ ತಿಳಿಸಿದರು. ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಕರಣಗಳ ವಿಲೇವಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆಗಾ ಲೋಕ ಅದಾಲತ್ ಅಡಿಯಲ್ಲಿ ಉಭಯ ಪಕ್ಷಗಾರರು ರಾಜಿ ಮಾಡಿಕೊಂಡು, ಕಡಿಮೆ ಖರ್ಚಿನಲ್ಲಿ ಹಾಗೂ ತ್ವರಿತವಾಗಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಬಹುದು. ಈ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ರಾಜಿ ಸಂಧಾನದ ಮೂಲಕ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿ ಮಾಡಲಾಗುವುದು. ಆಸಕ್ತ ಕಕ್ಷಿದಾರರು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರನ್ನು ಸಂಪರ್ಕಿಸಬೇಕೆಂದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಪ್ರಧಾನ ದಿವಾಣಿ ನ್ಯಾಯಾಧೀಶ ಬಾಳಪ್ಪ ಇದ್ದರು.
ಬಿಜೆಪಿಗೆ ಮಾಲಾ ನೇಮಕ
ಹಿರೇಕೆರೂರು: ಪಟ್ಟಣದ ಮಾಲಾ ನವೀನಕುಮಾರ ಮಾದರ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಕರಬಸಮ್ಮನವರ ತಿಳಿಸಿದ್ದಾರೆ.
13ರಂದು ಎಂ.ಬಿ. ಪಾಟೀಲ್ ಭೇಟಿ
ಹಾವೇರಿ: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ನ. 13ರಂದು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು, 3.30ಕ್ಕೆ ಹಾವೇರಿಗೆ ಆಗಮಿಸಿ, ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಪರಿವೀಕ್ಷಣೆ ನಡೆಸುವರು. ಅನಂತರ ಸಂಜೆ 6 ಗಂಟೆಗೆ ರಾಣಿಬೆನ್ನೂರಿನಿಂದ ಶಿವಮೊಗ್ಗಕ್ಕೆ ತೆರಳುವರು.
ಇಂದು ಕೆರೂಡಿ ಮಾರುತಿ ದೇವರ ಪ್ರಾಣಪ್ರತಿಷ್ಠೆ
ಬ್ಯಾಡಗಿ: ತಾಲೂಕಿನ ಕೆರೂಡಿ ಗ್ರಾಮದ ಮಾರುತಿ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಹೋತ್ಸವ ನ. 9ರಂದು ನಡೆಯಲಿದೆ. ಕೂಡಲ ಗುರುನಂಜೇಶ್ವರ ಮಠದ ನಂಜೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಜಡೆ ಗ್ರಾಮದ ಗುರುಶಾಸ್ತ್ರಿ, ಕುಮಾರ ಸಿದ್ಧಲಿಂಗೇಶ್ವರ ಹಿರೇಮಠ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 11.30ಕ್ಕೆ ಜರುಗುವ ಧಾರ್ಮಿಕ ಸಭೆಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಸುರೇಶಗೌಡ, ಮಕ್ಕಳ ತಜ್ಞ ಲಕ್ಷ್ಮಣರಾವ್ ಕುಲಕರ್ಣಿ ಪಾಲ್ಗೊಳ್ಳುವರು. ಕೂಡಲ ಗುರುನಂಜೇಶ್ವರ ಶ್ರೀಗಳ ತುಲಾಭಾರ ಸೇವೆ ಜರುಗಲಿದೆ ಎಂದು ಸಮಿತಿ ತಿಳಿಸಿದೆ.
ನಾಳೆ ಪೂರ್ವಭಾವಿ ಸಭೆ
ಹಾನಗಲ್ಲ: ಪ್ರದೇಶ ಕುರುಬರ ಸಂಘದ ತಾಲೂಕು ಘಟಕ ಕನಕದಾಸರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯನ್ನು ನ. 10ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ. ಭಕ್ತಶ್ರೇಷ್ಠ ಕನಕದಾಸರ ಜಯಂತಿ ನ. 20ರಂದು ಜರುಗಲಿದ್ದು, ಇದರ ಪೂರ್ವ ಸಿದ್ಧತೆಗಾಗಿ ಕುರುಬ ಸಮಾಜ ಬಾಂಧವರ ಹಾಗೂ ಕುರುಬ ನೌಕರ ಸಂಘದವರ ಸಭೆ ಕರೆಯಲಾಗಿದೆ. ಸಂಘದ ತಾಲೂಕಾಧ್ಯಕ್ಷ ದಾನಪ್ಪ ಗಂಟೇರ ಅಧ್ಯಕ್ಷತೆ ವಹಿಸುವರು. ಅರ್ಥಪೂರ್ಣ ಕಾರ್ಯಕ್ರಮದ ಆಯೋಜನೆಗಾಗಿ ರೂಪುರೇಷೆ ನಿರ್ಣಯಿಸಲು ಸಮಾಜ ಬಾಂಧವರು ಸಲಹೆ-ಸೂಚನೆ ನೀಡಬೇಕೆಂದು ಕಾರ್ಯದರ್ಶಿ ಮಹೇಶ ಪವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಮತದಾರರ ನೋಂದಣಿ ಅಭಿಯಾನ
ಹಾನಗಲ್ಲ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಹೆಸರು ನೋಂದಣಿ ಅಭಿಯಾನ ನ. 10ರಂದು ಹಾನಗಲ್ಲಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಉದ್ಘಾಟನೆಗೊಳ್ಳಲಿದೆ. ಶಾಸಕ ಮನೋಹರ ತಹಶೀಲ್ದಾರ ಅಧ್ಯಕ್ಷತೆ ವಹಿಸಲಿದ್ದು, ಕಾಂಗ್ರೆಸ್ ಪರಿಶಿಷ್ಟ ಜಾತಿ, ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ, ಕೆಪಿಸಿಸಿ ಸದಸ್ಯರಾದ ಸತೀಶ ದೇಶಪಾಂಡೆ, ರಾಜಶೇಖರ ಸಾಲಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಸ್. ಬಡಿಗೇರ, ಮಲ್ಲನಗೌಡ ಪಾಟೀಲ ಆಗಮಿಸುವರು.
ಗಾಂಜಾ ವಶ: ಆರೋಪಿ ಸೆರೆ
ಹಾವೇರಿ: ಅಕ್ರಮವಾಗಿ ಗಾಂಜಾ ಹೊಂದಿದ್ದ ಸವಣೂರಿನ ಮಹಾಂತೇಶ ಗೌಳಿ ಎಂಬಾತನನ್ನು ಶುಕ್ರವಾರ ಬಂಧಿಸಿರುವ ಪೊಲೀಸರು, 1.50 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಎಎಸ್ಪಿ ಡಿ.ಎಸ್. ಜಗಮಯ್ಯನವರ, ಸವಣೂರು ಸಿಪಿಐ ಶಿವಾನಂದ ವಾಲಿಕಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಅರಳಿಹಳ್ಳಿ: ಮೊಹರಂ ಅಂಗವಾಗಿ 13ರಂದು ನಾಟಕ ಪ್ರದರ್ಶನ
ರಾಣಿಬೆನ್ನೂರು: ಮೊಹರಂ ಹಬ್ಬದ ಪ್ರಯುಕ್ತ ತಾಲೂಕಿನ ಚಿಕ್ಕಅರಳಿಹಳ್ಳಿ ಗ್ರಾಮದ ಅಲ್ಲಾ ಸ್ವಾಮಿ ಯುವಕ ಸಂಘದಿಂದ ನ. 13ರಂದು ರಾತ್ರಿ 9.30ಕ್ಕೆ 'ಗರುಡರಾಜ್ಯದಲ್ಲಿ ಘಟಸರ್ಪ' ಸಾಮಾಜಿಕ ನಾಟಕ ಪ್ರದರ್ಶನವಿದೆ. ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದು, ಎಪಿಎಂಸಿ ಮಾಜಿ ಅಧ್ಯಕ್ಷ ಏಕನಾಥ ಬಿ. ಭಾನುವಳ್ಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಯುವ ಕಾಂಗ್ರೆಸ್ ಕೋಶಾಧ್ಯಕ್ಷ ಪ್ರಕಾಶ ಕೋಳಿವಾಡ, ಗುಪ್ತಾ ಪ್ರೌಢಶಾಲೆ ಅಧ್ಯಕ್ಷ ಶ್ರೀನಿವಾಸ ಸಾಹುಕಾರ, ನಗರಸಭೆ ಉಪಾಧ್ಯಕ್ಷ ಶಿವಪ್ಪ ಮಣೇಗಾರ, ಸದಸ್ಯ ಶಶಿಧರ ಬಸೇನಾಯ್ಕರ, ರಾಘವೇಂದ್ರ ಚಿನ್ನಿಕಟ್ಟಿ, ಜಿಪಂ ಅಧ್ಯಕ್ಷ ರಾಜೆಂದ್ರ ಹಾವೇರಣ್ಣನವರ, ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ಗಂಗಾಧರ ಬಣಕಾರ, ನಾಗರಾಜ ಪವಾರ, ರವಿಂದ್ರಗೌಡ ಎಫ್. ಪಾಟೀಲ, ಬಸವರಾಜಪ್ಪ ಸವಣೂರು, ಬಸವರಾಜ ಧಾರವಾಡ ಆಗಮಿಸುವರೆಂದು ಸಂಘಟಕ ತಿಮ್ಮನಗೌಡ ಸಣ್ಣಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃತಕ ಕಾಲು ಜೋಡಣೆ
ರಾಣಿಬೆನ್ನೂರು: ಬಿರ್ಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆದಿತ್ಯ ವಿಕ್ರಮ್ ಬಿರ್ಲಾ ಅವರ ಜನ್ಮದಿನದ ಅಂಗವಾಗಿ ಅಂಗವಿಕಲರಿಗೆ ಉಚಿತವಾಗಿ ಜೈಪುರ ಕೃತಕ ಕಾಲು ಜೋಡಣಾ ಶಿಬಿರವನ್ನು ನ. 14ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಗ್ರಾಸಿಂ ಸಭಾ ಭವನದಲ್ಲಿ ನಡೆಸಲಾಗುವುದು. ಆಸಕ್ತ ಅಂಗವಿಕಲರು ಹೆಚ್ಚಿನ ಮಾಹಿತಿಗಾಗಿ ಗ್ರಾಸಿಂ ಜನಸೇವಾ ಟ್ರಸ್ಟ್‌ನ ಕಾರ್ಯಕ್ರಮ ಸಂಘಟಕ ಎನ್.ಎಚ್. ರಾಮಣ್ಣ (ಮೊ. 9986377450), ರೇಣುಕಾ ನಾಗನೂರು (ಮೊ. 9964348288) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಮೊಬೈಲ್ ಮನಿ ಟ್ರಾನ್ಸ್‌ಫರ್ ಸೇವೆ ಶುರು
ಹಾವೇರಿ: ಹಣ ವರ್ಗಾವಣೆ ಮಾಡುವವರಿಗೆ ಸಂತಸದ ಸುದ್ದಿ. ಭಾರತೀಯ ಅಂಚೆ ಇಲಾಖೆ ಮೊಬೈಲ್ ಮನಿ ಟ್ರಾನ್ಸ್‌ಫರ್ ಎಂಬ ನೂತನ ಹಣ ವರ್ಗಾವಣೆ ಸೇವೆಯನ್ನು ಆರಂಭಿಸಿದೆ. ಈ ಮೂಲಕ ದೇಶದ ಯಾವುದೇ ಸ್ಥಳಕ್ಕೆ ಕಡಿಮೆ ವೆಚ್ಚದಲ್ಲಿ, ತ್ವರಿತವಾಗಿ ಹಣ ವರ್ಗಾವಣೆ ಮಾಡಬಹುದು. ರಾಜ್ಯದ 400 ಅಂಚೆ ಕಚೇರಿಗಳಲ್ಲಿ ಹಾಗೂ ಹಾವೇರಿ ಜಿಲ್ಲಾದ್ಯಂತ ಈ ಸೇವೆ ಲಭ್ಯವಿದೆ. ರು. 1000ದಿಂದ ರು. 10 ಸಾವಿರ ವರೆಗಿನ ಮೊತ್ತವನ್ನು ವರ್ಗಾವಣೆ ಮಾಡಬಹುದು. ತಕ್ಷಣವೇ ಹಣ ಕಳುಹಿಸಿದವರ ಹಾಗೂ ಸ್ವೀಕರಿಸುವವರ ಮೊಬೈಲ್‌ಗೆ ಸಂದೇಶ ಬರುತ್ತದೆ. ಹತ್ತಿರದ ಅಂಚೆ ಕಚೇರಿಗೆ ತೆರಳಿ ಹಣ ಸ್ವೀಕರಿಸಬಹುದು. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಹಾವೇರಿ ಅಂಚೆ ವಿಭಾಗದ ಅಧೀಕ್ಷಕ ಆರ್.ಜಿ. ಬ್ಯಾಟೆಪ್ಪನವರ ಹಾಗೂ ಹಾವೇರಿ ಪ್ರಧಾನ ಅಂಚೆ ಪಾಲಕ ಸಿ.ಕೆ. ಮುತ್ತಗಿ ಕೋರಿದ್ದಾರೆ. ಮಾಹಿತಿಗೆ ಹತ್ತಿರದ ಅಂಚೆ ಕಚೇರಿ ಅಥವಾ ಹಾವೇರಿ ಪ್ರಧಾನ ಅಂಚೆ ಕಚೇರಿ ದೂ. 08375-252213, ಪ್ರಶಾಂತ ದೊಡ್ಡಮನಿ (ದೂ. 08375-252513, ಮೊ. 9036906439) ಹಾಗೂ ಎಂ.ಎ. ಬಂಕಾಪುರ (ಮೊ. 9972270258) ಸಂಪರ್ಕಿಸಬಹುದು.
ಕಾನೂನು ಅರಿವು-ನೆರವು
ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನ. 9ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಜರುಗಲಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಆರ್. ರೇಣಕೆ ಉದ್ಘಾಟಿಸುವರು. ಪ್ರಾಚಾರ್ಯ ಡಾ ಕೆ.ಬಿ. ಪ್ರಕಾಶ ಅಧ್ಯಕ್ಷತೆ ವಹಿಸುವರು. ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಶ್ರೀಪಾದ, ಹೆಚ್ಚುವರಿ ಕಿರಿಯ ದಿವಾಣಿ ನ್ಯಾಯಾಧೀಶ ಎಸ್.ಬಿ. ಕೆಂಭಾವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ ಪಾಲ್ಗೊಳ್ಳುವರು. ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಎಂ.ವಿ. ಚನ್ನಕೇಶವ ರೆಡ್ಡಿ ರ್ಯಾಗಿಂಗ್ ನಿಷೇಧ ಕಾಯ್ದೆ ಹಾಗೂ ಡಿ.ಐ.ಆರ್.ಡಿ.ಎಸ್. ನಿರ್ದೇಶಕ ಎನ್.ಸಿ. ಪಾಲಾಕ್ಷ ಲೈಂಗಿಕ ಕಾಯಿಲೆಗಳು- ತಡೆಗಟ್ಟುವಿಕೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್. ಪಾಟೀಲ ತಿಳಿಸಿದ್ದಾರೆ.