ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೌಜನ್ಯಾ ಪ್ರಕರಣ ಸಿಬಿಐಗೆ: ವಿಜಯೋತ್ಸವ

Vishwanath S
Updated On : 9 Nov 2013, 11:59 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 8
ಎಸ್‌ಎಫ್‌ಐ, ಇತರ ಪ್ರಗತಿಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸಿ ಎಸ್‌ಎಫ್‌ಐ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.
ಮುಖಂಡ ಸುಭಾಸ ಮಾದರ ಮಾತನಾಡಿ, ಜನಾಗ್ರಹಕ್ಕೆ ಮಣಿದು ರಾಜ್ಯ ಸರ್ಕಾರ ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ರಾಜ್ಯದಲ್ಲಿ ಅಷ್ಟೇ ಗುರುತರವಾಗಿರುವ ಇನ್ನೂ 462 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಆಗಿಯೇ ಇಲ್ಲ. ತನಿಖೆಯೂ ಸರಿಯಾಗಿ ಆಗದೆ ಸಂತ್ರಸ್ತರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ನ್ಯಾಯದ ಬಾಗಿಲು ತೆರೆಯಬೇಕಾದರೆ ಎಲ್ಲ ಪ್ರಕರಣಗಳೂ ಸಿಬಿಐ ತನಿಖೆಗೆ ಒಳಪಡಬೇಕು. 27 ವರ್ಷಗಳಿಂದ ನೆನೆಗುದಿಗೆ ಬಿದ್ದ ಪದ್ಮಲತಾ, ವೇದವಲ್ಲಿ ಪ್ರಕರಣ, ಸೌಜನ್ಯಾ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಬಹುದಾಗಿದ್ದ ರವಿ ಪೂಜಾರಿ ಅಸಹಜ ಸಾವು- ಇವುಗಳಿಗೆ ಉತ್ತರ ನೀಡಬಲ್ಲವರು ಯಾರು ಎಂಬುದೇ ಪ್ರಶ್ನೆ. ಸರ್ಕಾರ ಸೌಜನ್ಯಾ ಪ್ರಕರಣದ ಜತೆ ಮಹತ್ವದ 462 ಪ್ರಕರಣಗಳನ್ನೂ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಹೋರಾಟದ ಹೊಸ ಪರ್ವ
ಮಲ್ಲೇಶ ಗೋಟನವರ ಮಾತನಾಡಿ, ಸೌಜನ್ಯಾ ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿ ವರ್ಷವೇ ಸಂದಿದೆ. ಈ ಪ್ರಕರಣದಲ್ಲಿ ಸಿಒಡಿ ನೀಡಿರುವ ವರದಿ ಸ್ಥಳೀಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ಇದೆ. ಸೌಜನ್ಯಾ ನಾಡಿನ ಮಗಳಾಗಿ ಹೋರಾಟದ ಹೊಸ ಪರ್ವಕ್ಕೆ ನಾಂದಿಯಾಗಿದ್ದಾಳೆ. ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದ್ದಾಳೆ. ಸಿಬಿಐ ತನಿಖೆ ನಿಷ್ಪಕ್ಷಪಾತವಾಗಿ ಆಗಿ, ನ್ಯಾಯ ಸಿಗಲಿ. ಕೆಲವೆಡೆ ಸಕ್ರಿಯವಾಗಿರುವ ಮಾಫಿಯಾ ಗ್ಯಾಂಗ್‌ಗಳನ್ನು ಪೊಲೀಸರೂ ಬೆಂಬಲಿಸುತ್ತಿದ್ದಾರೆ. ಇಂಥ ತಂಡಗಳನ್ನು ಸೆದೆಬಡಿಯಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು
ರಾಜ್ಯದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ, ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳನ್ನು ಕಾಲಮಿತಿಯಲ್ಲಿ ತನಿಖೆ ಮಾಡಿ ಇತ್ಯರ್ಥ ಮಾಡಬೇಕು. ಸಾಕ್ಷ್ಯನಾಶ ತಪ್ಪಿಸಬೇಕು. ಸಾಕ್ಷ್ಯಾಧಾರ ರಹಿತ ಪ್ರಕರಣಗಳೆಂದು ಬಿಂಬಿಸಲು ಯತ್ನಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಸ್‌ಎಫ್‌ಐ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಸುಭಾಸ ಮಾದರ, ಮಲ್ಲೇಶ ಗೋಟನವರ, ಜೋತಿ ದೊಡ್ಮನಿ, ಪರಶುರಾಮ ಎನ್., ವಿದ್ಯಾರ್ಥಿ ಮುಖಂಡರಾದ ದೀಪಾ ದೊಡ್ಮನಿ, ಶ್ರೀಧರ ಭಜಂತ್ರಿ, ವೆಂಕಟೇಶ ವಡ್ಡರ, ಸಂತೋಷ ಹಿರೇವಳ್ಳಿ, ಸಂಗೀತಾ ಸನ್ನಿಧಿ, ಸಂಗೀತಾ ಕೋಟಿ, ಪವಿತ್ರಾ ಎಮ್ಮಿ, ಮಂಜುಳಾ ದಾಸರ, ಸುನೀತಾ, ಪ್ರಭಾಕರ ಅಕ್ಕಸಾಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement