ಅಭಿವೃದ್ಧಿಗೆ ಸಹಕರಿಸಿ: ಬಣಕಾರ
ಕನ್ನಡಪ್ರಭ, ವಾರ್ತೆ, ಹಿರೇಕೆರೂರು, ನ. 9
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಎಲ್ಲರೂ ಪಕ್ಷಭೇದ ಮರೆತು ಸಹಕರಿಸಬೇಕು. ಗ್ರಾಮೀಣ ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಖಾತ್ರಿ ಯೋಜನೆಯಲ್ಲಿ 'ನಮ್ಮ ಹೊಲ -ನಮ್ಮ ರಸ್ತೆ'ಯ ರು. 5 ಲಕ್ಷ ಮೊತ್ತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ನರೇಗಾ ಒಂದು ಮಹತ್ವದ ಯೋಜನೆ. ಇದನ್ನು ಸದ್ಬಳಕೆ ಮಾಡಿಕೊಂಡು, ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಪಿಡಿಒ ಹಾಗೂ ಅಭಿಯಂತರು ಹೆಚ್ಚು ಆಸಕ್ತಿ ವಹಿಸಿ, ಗುಣಮಟ್ಟದ ಕಾಮಗಾರಿ ಪೂರೈಸಬೇಕು. ಸಣ್ಣ ಪುಟ್ಟ ಲೋಪಗಳಿದ್ದಲ್ಲಿ ಚರ್ಚಿಸಿ, ಬಗೆಹರಿಸಬೇಕು. ಆಗಲೂ ಸಾಧ್ಯವಾಗದಿದ್ದರೆ ನಮ್ಮ ಗಮನಕ್ಕೆ ತರಬೇಕು. ರೈತರು ತಮ್ಮ ಹೊಲಗಳಿಗೆ ಹೋಗುವ ರಸ್ತೆನಿರ್ಮಾಣಮಾಡಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ ರು. 10 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಕಡೂರ ಗ್ರಾಮದಲ್ಲಿ ಕ್ರೀಡಾಂಗಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು, ಅಗತ್ಯ ಇರುವ ಕಡೆಗಳಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಸವಿತಾ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ರೇಣುಕಮ್ಮ ಚಲುವಾದಿ, ಜಿಪಂ ಮಾಜಿ ಸದಸ್ಯ ಶಿವರಾಜ ಹರಿಜನ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಿಮಠ, ತಾಲೂಕಾಧ್ಯಕ್ಷ ಗಿರೀಶ ಬಾರ್ಕಿ, ಪಿ.ಆರ್. ದೊಡ್ಮನಿ, ಶಿದ್ದಪ್ಪ ಬಣಕಾರ, ಮಂಜುನಾಥ ಶೆಟ್ಟರ, ರುದ್ರಗೌಡ ದ್ಯಾಮನಗೌಡರ, ಹನುಮಗೌಡ ಹುಡೇದ, ದಾನಪ್ಪ ದಾನೆಗೊಂಡರ, ಬಸವರಾಜ ಮಂಗಣಿ, ಪಿಡಿಒ ಪಕ್ಕೀರಪ್ಪ, ಅಭಿಯಂತರ ಶಿದ್ದನಗೌಡ ಕರಬಸಳ್ಳವರ ಇದ್ದರು.