ಕಬ್ಬಿಗೆ ಏಕರೂಪ ದರ ನಿಗದಿಪಡಿಸಿ
ಹಾವೇರಿ: ರಾಜ್ಯ ಸರ್ಕಾರವು ರೈತರು ಬೆಳೆದ ಕಬ್ಬಿಗೆ ದರ ನಿಗದಿ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದ್ದು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕ ದರ ನಿಗದಿಗೆ ಚಿಂತನೆ ನಡೆಸುತ್ತಿದೆ. ಇದು ರೈತರಿಗೆ ಮೋಸ ಮಾಡುವ ತಂತ್ರವಾಗಿದ್ದು, ರಾಜ್ಯಾದ್ಯಂತ ಏಕರೂಪದ ದರ ನಿಗದಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.
ಸ್ಥಳೀಯ ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಗುರುಮಠ ಮಾತನಾಡಿ, ರಾಜ್ಯ ಸರ್ಕಾರವು ಎಸ್‌ಎಪಿ ಕಾನೂನು ಜಾರಿಗೆ ಮಾಡಿದಾಗಿನಿಂದಲೂ ಕಳೆದ ಎರಡು ತಿಂಗಳಿಂದ ಕಬ್ಬಿಗೆ ಬೆಲೆ ನಿಗದಿ ಮಾಡಲು ವಿಳಂಬ ಮಾಡುತ್ತಿದೆ. ಇದರಿಂದ ಅವಧಿ ಮೀರಿದ ಕಬ್ಬು ಹೊಲದಲ್ಲಿಯೇ ಇರುವುದರಿಂದ ರೈತ ಆತಂಕದಲ್ಲಿ ಇದ್ದಾನೆ. ಇದೇ ವೇಳೆ ಉತ್ತರ ಹಾಗೂ ದಕ್ಷಿಣ ಕರ್ನಾಕವೆಂದು ಎರಡು ತರಹದ ದರ ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದ್ದು, ಇಳುವರಿ ಆಧಾರದ ಮೇಲೆ ರಾಜ್ಯಾದ್ಯಂತ ಏಕರೂಪದ ದರ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಉಗ್ರ ಹೋರಾಟದ ಎಚ್ಚರಿಕೆ: ಕೇಂದ್ರ ಸರ್ಕಾರ ದೇಶಕ್ಕೆ ಅನ್ವಯವಾಗುವಂತೆ ದರ ನಿಗದಿ ಮಾಡಿದಂತೆ ರಾಜ್ಯವೂ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರು. 3 ಸಾವಿರ ನಿಗದಿ ಮಾಡಬೇಕು. ಇಲ್ಲದಿದ್ದರೆ ರೈತರಿಗೆ ತಾರತಮ್ಯ ಮಾಡಿದಂತಾಗುತ್ತದೆ. ಕಬ್ಬು ಕಡಿಯುವುದು ಮತ್ತು ಸಾಗಣೆಯನ್ನು ಕಾರ್ಖಾನೆಗಳಿಗೆ ವಹಿಸಿ ದರ ನಿಗದಿ ಮಾಡಬೇಕು. ಕಬ್ಬು ಸರಬರಾಜು ಆದ 15 ದಿನದೊಳಗೆ ರೈತರಿಗೆ ಹಣ ಪಾವತಿಸಬೇಕು. ತೂಕದಲ್ಲಿ ಮೋಸವಾಗುವುದನ್ನು ತಪ್ಪಿಸಲು ಎಪಿಎಂಸಿಯಿಂದ ತೂಕ ಮಾಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳದಿದ್ದರೆ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪರಿಹಾರ ಒದಗಿಸಲು ಪ್ರಯತ್ನಿಸಿ: ಹಾವೇರಿ ಸೇರಿ ಧಾರವಾಡ, ಚಿತ್ರದುರ್ಗ, ಬೆಳಗಾಂವಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ರೈತರು ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬಿಟಿ ಹತ್ತಿ ಉಳುಮೆ ಮಾಡುತ್ತಿದ್ದಾರೆ. ಆದರೆ, ಹತ್ತಿ ಬೆಳೆಯಲ್ಲಿ ಕಾಯಿ ಇಲ್ಲದೇ ರೈತರು ಕಂಗಾಲಾಗುವಂತಾಗಿದೆ. ಅನೇಕ ಹೋರಾಟ, ಪ್ರತಿಭಟನೆ ಬಳಿಕ ಈಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸುವ ಕುರಿತು ಕೆಲ ಶಾಸಕರು ಆಸಕ್ತಿ ವಹಿಸಿರುವುದು ಸ್ವಾಗತಾರ್ಹ. ಆದರೆ, ಈಗ ಕನಕ ಹತ್ತಿ ಬೀಜದ ಬಗ್ಗೆ ಮಾತ್ರ ಪ್ರಸ್ತಾಪವಾಗಿದ್ದು, ಉಳಿಕ ಕೆಲ ಕಂಪನಿಗಳ ಹತ್ತಿ ಬೀಜ ಹಾಕಿ ನಷ್ಟಕ್ಕೆ ಗುರಿಯಾದ ರೈತರಿಗೂ ಪರಿಹಾರ ನೀಡಬೇಕು. ಅದೇ ರೀತಿ ಗೋವಿನ ಜೋಳ ಬೆಳೆಯೂ ಬಾರದೇ ಇರುವುದರಿಂದ ಅವರಿಗೂ ನ್ಯಾಯ ಒದಗಿಸಬೇಕು. ಆದ್ದರಿಂದ ಈ ಎಲ್ಲ ಜಿಲ್ಲೆಗಳ ಶಾಸಕರು ಮುಂಬರುವ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಿ ನಷ್ಟಕ್ಕೊಳಗಾದ ಎಲ್ಲ ರೈತರಿಗೆ ಪರಿಹಾರ ಕೊಡಿಸಲು ಶ್ರಮಿಸಬೇಕು ಎಂದು ಶಿವಾನಂದ ಗುರುಮಠ ಆಗ್ರಹಿಸಿದರು.
ರಾಷ್ಟ್ರೀಯ ಹಾಗೂ ರಾಜ್ಯ ಬೀಜ ಉತ್ಪಾದನೆ ಕೇಂದ್ರಗಳಿದ್ದರೂ ಅವು ಪ್ರಸ್ತುತ ಪ್ರಯೋಜನಕ್ಕೆ ಬಾರದಂತಾಗಿವೆ. ಆದ್ದರಿಂದ ಸರ್ಕಾರ ಬೀಜ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯವಿದೆ. ರೈತರು ಬೀಜ ಖರೀದಿಸಿ ಮೋಸ ಹೋದರೆ ಸಂಬಂಧಪಟ್ಟ ಕಂಪನಿಯೇ ಜವಾಬ್ದಾರಿಯಾಗಿ ರೈತರಿಗೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಸರ್ಕಾರವೇ ರೈತರ ಬೆಳೆ ವಿಮೆ ಪ್ರೀಮಿಯಂ ಪಾವತಿಸಿ ವಿಮೆ ಬರುವಂತೆ ನೋಡಿಕೊಳ್ಳಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳು ಮೊದಲು ಬೀಜ ಕಂಪನಿಗಳ ಆಮಿಷಕ್ಕೆ ಬಲಿಯಾಗುವುದು ನಿಲ್ಲಬೇಕು. ಇಲ್ಲದಿದ್ದರೆ ಕಂಪನಿಗಳಿಂದ ಮೋಸ ಹೋದಾಗ ರೈತರಿಗೆ ನ್ಯಾಯ ದೊರಕಿಸಿಕೊಡಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಎನ್.ಎಂ. ಪಾಟೀಲ, ರಾಮಣ್ಣ ದೊಡ್ಮನಿ, ಸುರೇಶ ಸೊಪ್ಪಿನ, ರಾಜಶೇಖರ ಬೆಟಗೇರಿ, ಬಿ.ಆರ್. ಪಾಟೀಲ, ನಿಂಗಪ್ಪ ಪೂಜಾರಿ ಇದ್ದರು.