ನಾಳೆ ಕೆಜೆಪಿಯಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ನ. 10
ರಾಜ್ಯದ ಎಲ್ಲ ವರ್ಗಗಳ ಬಡ ಜನತೆಗೆ ಶಾದಿ ಭಾಗ್ಯ ಯೋಜನೆಯನ್ನು ವಿಸ್ತರಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅ. 31ರಿಂದ ಬೆಂಗಳೂರಿನಲ್ಲಿರುವ ನಡೆಸುತ್ತಿರುವ ಸತ್ಯಾಗ್ರಹ ಬೆಂಬಲಿಸಿ ನ. 12ರಂದು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ಜನತಾ ಪಕ್ಷದ ವತಿಯಿಂದ ಧರಣಿ ನಡೆಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ, ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಿಗೆ ಮದುವೆ ಸಂದರ್ಭದಲ್ಲಿ ರು. 50 ಸಾವಿರ ಸಹಾಯಧನ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ. ಈ ಯೋಜನೆಯನ್ನು ಇತರ ಎಲ್ಲ ಬಡ ವರ್ಗದ ಜನತೆಗೆ ಜಾರಿಗೊಳಿಸಬೇಕು ಎಂದು ಅಗ್ರಹಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಿರಶನ ಹಮ್ಮಿಕೊಂಡಿದ್ದು, ಸೌಜನ್ಯಕ್ಕಾದರೂ ಸರ್ಕಾರದ ಪ್ರತಿನಿಧಿಗಳು ಅವರನ್ನು ಭೇಟಿಯಾಗಿದಿರುವುದು ವಿಷಾದದ ಸಂಗತಿಯಾಗಿದೆ.
ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳ ತಲಾ ಒಂದೊಂದು ಕ್ಷೇತ್ರಕ್ಕೆ 5ರಿಂದ 6 ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಇನ್ನುಳಿದ ಫಲಾನುಭವಿಗಳು ಶಾದಿ ಭಾಗ್ಯ ಯೋಜನೆಯಿಂದ ವಂಚಿತರಾಗಲಿದ್ದಾರೆ. ಸರ್ಕಾರ ರೂಪಿಸುವ ಯಾವುದೇ ಯೋಜನೆ ಎಲ್ಲ ಬಡ ವರ್ಗದ ಜನತೆಗೆ ಉಪಯೋಗವಾಗಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಯಡಿಯೂರಪ್ಪ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬೆಂಬಲಿಸಿ ನ. 16ರಂದು ತಾಲೂಕು ಹಾಗೂ ಹಾವೇರಿ ಜಿಲ್ಲೆಯಿಂದ ಒಂದು ಸಾವಿರ ಕಾರ್ಯಕರ್ತರು ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.