ಮೂಲಸೌಕರ್ಯ ಕಲ್ಪಿಸಲು ಆಗ್ರಹ
ಶಿಗ್ಗಾಂವಿ: ತಾಲೂಕಿನ ಹೊಸೂರು ಗ್ರಾಪಂ ವ್ಯಾಪ್ತಿಗೆ ಸೇರಿರುವ ನೀರಲಗುಡ್ಡ ಗ್ರಾಮಸ್ಥರು ಸುಮಾರು 25 ಎಕರೆ ಜಮೀನಿನ ಹುಲ್ಲುಗಾವಲಲ್ಲಿ 25ರಿಂದ 30 ವರ್ಷಗಳಿಂದ ವಾಸಿಸುತ್ತಾ ಬಂದಿದ್ದು, ತಕ್ಷಣ ಕಂದಾಯ ಗ್ರಾಮವನ್ನಾಗಿ ಮಾಡಿ ಮೂಲ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರಲಗುಡ್ಡದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿದ್ದು, ಗ್ರಾಪಂನವರು ಕುಡಿಯುವ ನೀರಿಗಾಗಿ ಎರಡು ಕೊಳವೆ ಬಾವಿಗಳಿಂದ ಪೂರೈಸುತ್ತಿದ್ದು, ವಿದ್ಯುತ್ ವ್ಯವಸ್ಥೆಗಳನ್ನೂ ನೀಡಿದ್ದಾರೆ. ಆದರೆ ಇನ್ನು ನಮಗೆ ವಾಸಿಸುವ ಮನೆಗಳು ಪಟ್ಟಾ ನೀಡುವಂತೆ ಸಾಕಷ್ಟು ಸಲ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಅನೇಕ ವರ್ಷಗಳಿಂದ ನಿರಂತರವಾಗಿ ಕಾಯಂ ನಿವಾಸಿಯಾಗಿದ್ದು, ನಮ್ಮ ಮಕ್ಕಳನ್ನು ಶಾಲೆಯಲ್ಲಿ ಹಚ್ಚಲು ಸಹಿತ ನಮಗೆ ಮೂಲಭೂತವಾಗಿ ಮನೆ ನಂಬರ್ ಹಾಗೂ ಪಡಿತರ ಕಾರ್ಡ್ಗಳನ್ನು ಕೇಳುತ್ತಿದ್ದು, ನಮಗೆ ಸಿಗಬೇಕಾದ ಮೂಲ ಸೌಲಭ್ಯದಿಂದ ವಂಚಿರಾಗುತ್ತಿದ್ದೇವೆ. ಆದ್ದರಿಂದ ತಕ್ಷಣ ನಮಗೆ ಪಡಿತರ ಕಾರ್ಡ್ ಹಾಗೂ ಮನೆಗಳ ಪಟ್ಟಾ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನೀರಲಗುಡ್ಡ ಗ್ರಾಮವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು ಅರಣ್ಯ ಪ್ರದೇಶದ ಕಾಡು ಪ್ರಾಣಿಗಳ ಭಯವೂ ಕೂಡಾ ನಿರಂತರವಾಗಿ ಕಾಡುತ್ತಿದೆ. ಜೀವನವನ್ನು ಪಣಪಾಗಿ ಇಟ್ಟು ಜೀವನ ಸಾಗಿಸುವಂತಾಗಿದೆ. ನೀರಲಗುಡ್ಡ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು, ಮನೆಗಳಿಗೆ ಪಟ್ಟಾ ವಿತರಿಸಬೇಕು, ಗ್ರಾಮದಿಂದ ಹೊಸೂರು, ದುಂಡಶಿ ಗ್ರಾಮಗಳಿಗೆ ಹೊಗಲು ಸರಿಯಾದ ರಸ್ತೆಯನ್ನು ದುರಸ್ಥಿ ಮಾಡಬೇಕು. ಅಲ್ಲದೆ ಗ್ರಾಮದ ಜನರಿಗೆ ಮೂಲಸೌಲಭ್ಯಗಳು ಸಿಗುವಂತಾಗಬೇಕು ಎಂದು ಅಲ್ಲಿಯ ಗ್ರಾಮಸ್ಥರು ಆಗ್ರಹಿಸಿದ್ದು, ಇಲ್ಲದೆ ಇದ್ದರೆ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಗಿರಿಯಪ್ಪ, ಅಕ್ಕಮ್ಮ ಲಮಾಣಿ, ಯಮನಪ್ಪ ರಾ ಲಮಾಣಿ, ರಾಜು, ರಮೇಶ ಲಮಾಣಿ, ಚೋಳಪ್ಪ ಲಮಾಣಿ, ಗಿರಿಜಾ, ಕಮಲವ್ವ ಲಮಾಣಿ, ಸುಶಿಲಾ ಇನ್ನಿತರರು ಆಗ್ರಹಿಸಿದ್ದಾರೆ.