ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್‌ನಿಂದ ದೇಶ ದಿವಾಳಿ

Lingaraj Badiger
Updated On : 12 Nov 2013, 11:23 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 11
ಅರ್ಥಶಾಸ್ತ್ರಜ್ಞನ ಕೈಯಲ್ಲಿ ಕೊಟ್ಟ ದೇಶ ಆಡಳಿತದ ಮೇಲೆ ಹಿಡಿತ ಸಾಧಿಸಿದ ಕುಟುಂಬ ರಾಜಕಾರಣದ ಕಾರಣದಿಂದ ಆರ್ಥಿಕ ದಿವಾಳಿತನದತ್ತ ಸಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ್ ಮುಳ್ಳೂರು ಆರೋಪಿಸಿದರು.
ಬೆಂಗಳೂರಿನಲ್ಲಿ ನ. 17ರಂದು ನಡೆಯಲಿರುವ ನರೇಂದ್ರ ಮೋದಿ ರ್ಯಾಲಿ ಬೆಂಬಲಿಸಿ ಬಿಜೆಪಿ ಯುವಮೋರ್ಚಾ ತಾಲೂಕು ಘಟಕ ಪಟ್ಟಣದಲ್ಲಿ ಆಯೋಜಿಸಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಅವರು, ಸಾಮಾಜಿಕ ನ್ಯಾಯದ ನೆಪದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಮೂಲಕ ಬಹುಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ. ಈ ಓಲೈಕೆ ಸಮಾಜ ವಿಘಟನೆಗೆ ನಾಂದಿಯಾಗಲಿದೆ. ಅಗ್ಗದ ಜನಪ್ರಿಯ ಕಾರ್ಯಕ್ರಮಗಳಿಂದ ದೇಶ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ ಎಂದರು.
ಯುವ ಮೋರ್ಚಾ ತಾಲೂಕಾಧ್ಯಕ್ಷ ವಿಜಯಭರತ್ ಬಳ್ಳಾರಿ ಮಾತನಾಡಿ, ಐದು ಕೋಟಿಗೂ ಹೆಚ್ಚು ಬಾಂಗ್ಲಾ ವಲಸಿಗರು ದೇಶದೊಳಕ್ಕೆ ನುಸುಳಿದರೂ ಕ್ರಮ ಕೈಗೊಳ್ಳಲು ಪ್ರಧಾನಿ ಅಸಮರ್ಥರಾಗಿದ್ದಾರೆ. ದೇಶವನ್ನು ಭಯೋತ್ಪಾದನೆ ಕಾಡುತ್ತಿದ್ದರೂ ಆಂತರಿಕ ಹಾಗೂ ಬಾಹ್ಯ ಭದ್ರತೆ ಇಲ್ಲದಂತಾಗಿದೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದ ಮೇಲೂ ಇವರು ಅಧಿಕಾರದಲ್ಲಿ ಇರಬೇಕೇ ಎಂದು ಪ್ರಶ್ನಿಸಿದರು.
ಯುವ ಮೋರ್ಚಾ ಗೌರವಾಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆದರಿಕೆಗಳಿಂದ ಜನರ ಮನಸ್ಸಿನಲ್ಲಿ ಅವರ ಹೆಸರು ಇನ್ನಷ್ಟು ಗಟ್ಟಿಗೊಳ್ಳಲಿದೆ. ಮೋದಿಯನ್ನು ಚುನಾಯಿಸಲು ದೇಶವೇ ಸಿದ್ಧವಾಗಿದೆ. ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಜನಸಾಗರವೇ ಇದಕ್ಕೆ ಸಾಕ್ಷಿ ಎಂದರು.
ಇದಕ್ಕೂ ಮುನ್ನ ತಾಲೂಕು ಕ್ರೀಡಾಂಗಣದಲ್ಲಿ ಜಮಾಯಿಸಿದ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಕೈಯಲ್ಲಿ ಪಂಜು ಹಿಡಿದು ಮೆರವಣಿಗೆ ಮೂಲಕ ಬಸ್ ನಿಲ್ದಾಣ, ಮುಖ್ಯ ರಸ್ತೆಯಲ್ಲಿ ಸಾಗಿದರು. ಮೋದಿ ಪರ ಘೋಷಣೆ ಕೂಗಿ, ಬೆಂಗಳೂರಿನ ರ್ಯಾಲಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಛಲವಾದಿ, ಬಸವರಾಜ ಹಲಗೇರಿ, ಯಲ್ಲಪ್ಪ ಕುಡುಪಲಿ, ವಿನಾಯಕ ಕಂಬಳಿ, ವೀರಭದ್ರಗೌಡ ಹೊಂಬರಡಿ, ಪಾಂಡುರಂಗ ಸುತಾರ, ಮಂಜು ಜಾಧವ, ರೋಹಿತ್ ರಾಯ್ಕರ್, ಮಂಜುನಾಥ ಕೋಡಿಹಳ್ಳಿ, ಸಂಜು ಮಡಿವಾಳರ, ಶಿವಶಂಕರ ಮಾಮನಿ, ಪಂಚಾಕ್ಷರಿ ಬನಪ್ಪನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement