ಜನ ಸೇವೆಗೆ ಬದ್ಧ: ಛಬ್ಬಿ
ಹಿರೇಕೆರೂರು: ಮತದಾರರಿಗೆ ದ್ರೋಹ ಬಗೆಯದೆ ಜನಸಾಮಾನ್ಯರ ಸೇವಕನಾಗಿ ಕೆಲಸ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಜರುಗಿದ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯನಾಗಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ಪರಿಹರಿಸಲು ಬದ್ಧ ಎಂದರು.
ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ವಾರ್ಷಿಕ ರು. 2 ಕೋಟಿ ಅನುದಾನ ಬರುತ್ತದೆ. ಹಿರೇಕೆರೂರಿನ ಗ್ರಾಪಂಗಳಿಗೆ ಆದ್ಯತೆ ಮೇರೆಗೆ ಅನುದಾನ ಹಂಚುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಸಿ. ಪಾಟೀಲ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮುಂತಾದುವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮಗಳ ಯಶಸ್ಸು ಕಂಡು ಯಡಿಯೂರಪ್ಪಗೆ ಹೊಟ್ಟೆ ಉರಿಯುತ್ತಿದೆ. ಬಿಜೆಪಿ ಸರ್ಕಾರ ಆಡಳಿತದ ಅವಧಿಯಲ್ಲಿ ಖಜಾನೆ ಲೂಟಿಯಾಗಿದೆ. ಒಡೆದಾಳುವ ನೀತಿ ಅಳವಡಿಸಿಕೊಂಡಿರುವ ಯಡಿಯೂರಪ್ಪ ಈ ಸರ್ಕಾರ ಉತ್ತಮ ಕೆಲಸ ಮಾಡುತ್ತಿರುವುದನ್ನು ಕಣ್ತೆರೆದು ನೋಡಲಿ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಕಾರ್ಯಕ್ರಮ ಉದ್ಘಾಟಿಸಿದರು. ಟಿ. ಈಶ್ವರ, ಪಪಂ ಅಧ್ಯಕ್ಷೆ ಶಿವಲೀಲಾ ಎಸ್.ಆರ್., ಪಪಂ ಸದಸ್ಯ ರಮೇಶ ತೋರಣಗಟ್ಟಿ, ಮಹ್ಮದ್ ವಡ್ಡಿನಕಟ್ಟಿ, ನಾಗರಾಜ ಗುಡ್ಡಳ್ಳಿ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಕಾಂಗ್ರೆಸ್ ಅಧ್ಯಕ್ಷ ಡಿ.ಸಿ. ಪಾಟೀಲ, ಎಸ್.ಕೆ. ಕರಿಯಣ್ಣನವರ, ಬಿ.ಎನ್. ಬಣಕಾರ, ಗುರುಶಾಂತ ಯತ್ನಳ್ಳಿ ಇದ್ದರು.