ಬಿಜೆಪಿಗೆ ತಕ್ಕ ಪಾಠ ಕಲಿಸಿ: ಲಮಾಣಿ
ಹಾವೇರಿ: ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ಬೇರೆ ಪಕ್ಷ ಸೇರಿ ತಮ್ಮನ್ನು ಆಯ್ಕೆಮಾಡಿದ್ದ ಮತದಾರರಿಗೆ ಮೋಹನ ಲಿಂಬಿಕಾಯಿ ದ್ರೋಹ ಬಗೆದಿದ್ದು, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸದ್ಯದಲ್ಲೇ ನಡೆಯುವ ಚುನಾವಣೆಯಲ್ಲಿ ಪದವೀಧರ ಮತದಾರರು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿನ ಹೊಸಮಠದಲ್ಲಿ ಭಾನುವಾರ ನಡೆದ ಹಾವೇರಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪದವೀಧರ ಮತದಾರ ನೋಂದಣಿ ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಅವರು, ನ. 15ರ ವರೆಗೆ ಎರಡನೇ ಹಂತದ ಹೆಸರು ನೋಂದಣಿಗೆ ಅವಕಾಶವಿದ್ದು, ಎಲ್ಲ ಅರ್ಹ ಪದವೀಧರರು ಹೆಸರು ನೋಂದಾಯಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿ, ಮುಂಬರುವ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ 1 ಲಕ್ಷ ಪದವೀಧರ ಮತದಾರರು ಹಕ್ಕು ಚಲಾಯಿಸುವ ಸಾಧ್ಯತೆಯಿದೆ. ಸಚಿವರಾಗಿರುವ ಎಚ್.ಕೆ. ಪಾಟೀಲರು 25 ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿ ಪದವೀಧರರ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಪದವೀಧರ ಮತದಾರರ ವಿಶ್ವಾಸ ಕಳೆದುಕೊಂಡರು. ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ನಗರಸಭೆ ಸದಸ್ಯರಾದ ರಮೇಶ ಕಡಕೋಳ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಹನಮಂತಪ್ಪ ಶರಸೂರಿ, ಶಿವಯೋಗಿ ಅರಿಶಣದ, ಐ.ಎ. ಪಠಾಣ, ಸೋಮನಗೌಡ ಪಾಟೀಲ, ಹೊನ್ನಪ್ಪ ದೊಡ್ಡಮನಿ, ಬಸವರಾಜ ಬಿ.ಟಿ., ಬಸವರಾಜ ಹಾದಿಮನಿ ಇದ್ದರು.