ಭೂಚೇತನ ಯೋಜನೆ ಬೆಳೆ ಕಟಾವು, ಇಳುವರಿ ಸಮೀಕ್ಷೆ
ರಾಣಿಬೆನ್ನೂರು: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗನಗೌಡ ರೆಡ್ಡಿ, ಕೃಷಿ ಅಧಿಕಾರಿ ರಿಜ್ವಾನ್ ಆರಿಫ್ ಹಾಗೂ ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ನಂದಗಾವಿ ಮಾರ್ಗದರ್ಶನದಲ್ಲಿ ಹೈದರಾಬಾದ್ ಇಕ್ರೀಶನ್ ಸಂಸ್ಥೆ ಅಧಿಕಾರಿಗಳು ಭೂಚೇತನ ಯೋಜನೆ ಅಡಿ ತಾಲೂಕಿನ ರೈತರ ಹೊಲಗಳಲ್ಲಿ ಬೆಳೆಯಲಾದ ಗೋವಿನ ಜೋಳದ ಬೆಳೆಗಳ ಕಟಾವು ಮತ್ತು ಇಳುವರಿ ಸಮೀಕ್ಷೆ ನಡೆಸಿದರು.
ಭೂ ಚೇತನ ಯೋಜನೆ ಅಡಿಯಲ್ಲಿ ತಾಲೂಕು ರೈತ ಕ್ಷೇತ್ರ ಪಾಠಶಾಲೆಯ ರೈತ ಅನುವುಗಾರರು ಮತ್ತು ರೈತರ ಸಹಕಾರದೊಂದಿಗೆ ತಾಲೂಕಿನ ಹಲಗೇರಿ, ದಂಡಗಿಹಳ್ಳಿ, ಮಣಕೂರು ಗ್ರಾಮಗಳ ರೈತರ ಹೊಲಗಳಲ್ಲಿ ಬೆಳೆದಿದ್ದ ಗೋವಿನ ಜೋಳವನ್ನು ಕಟಾವು ಮಾಡಿ ಇಳುವರಿ ಪ್ರಮಾಣವನ್ನು ನಿಗದಿಪಡಿಸಲಾಯಿತು.
ಹಲಗೇರಿ ಗ್ರಾಮದ ರೈತರಾದ ಚಂದ್ರಶೇಖರ ಮಲಗೊಡ ಹೊಲದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 42.5 ಕೆಜಿ ಇಳುವರಿ ಪ್ರಮಾಣ ಬಂದಿದೆ ಎಂದು ಇಕ್ರೀಶನ್ ಸಂಸ್ಥೆಯ ಅಧಿಕಾರಿ ವಿಶ್ವನಾಥ ತಿಳಿಸಿದರು.
ರೈತ ಅನುವುಗಾರರಾದ ರಾಜಶೇಖರ ಬಿಲ್ಲಹಳ್ಳಿ ಮಾತನಾಡಿ, ಭೂ ಚೇತನ ಯೋಜನೆ ಅಡಿಯಲ್ಲಿ ರೈತರಿಗೆ ವಿತರಿಸಲಾದ ಜಿಂಕ್, ಜಿಪ್ಸಂ, ಬೋರ್ಯಾಕ್ಸ್ ಹಾಗೂ ಇತರೆ ಲಘ ಪೋಷಕಾಂಶಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆದಿದ್ದಾರೆಂದು ತಿಳಿಸಿದರು. ರೈತ ಅನುವುಗಾರರಾದ ಬಸವರಾಜ ಭಾರ್ಕಿ, ಹಾಲೇಶ ಬಣಕಾರ, ಹನುಮಂತಪ್ಪ ತಳವಾರ ಇದ್ದರು.