ಮದುವೆ ಭಾಗ್ಯ: ಆಗ್ರಹ
ಶಿಗ್ಗಾಂವಿ: ಶಾದಿಭಾಗ್ಯ ಯೋಜನೆ ಒಂದು ಸಮುದಾಯಕ್ಕೆ ಮೀಸಲಾಗದೆ, ಎಲ್ಲ ವರ್ಗಗಳನ್ನೂ ಒಳಗೊಳ್ಳಬೇಕು. ರೈತರಿಗೆ ಕಳಪೆ ಬೀಜ ಪೂರೈಸಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಕನ್ನಡ ಜಾಗೃತ ವೇದಿಕೆ ಪ್ರತಿಭಟಿಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಿತು.
ಸೋಮವಾರ ಪಟ್ಟಣದ ಗಂಗಿಬಾವಿ ರಸ್ತೆಯ ವೃತ್ತದಿಂದ ಪುರಸಭೆ ವೃತ್ತ, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಮುಖಾಂತರ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಿದ ವೇದಿಕೆ ಅಧ್ಯಕ್ಷ ಮಹಾದೇವ ಹಡಪದ ಮಾತನಾಡಿ, ಶಾದಿಭಾಗ್ಯ ಎಂಬ ಬದಲು ಮದುವೆ ಭಾಗ್ಯ ಎಂದು ಯೋಜನೆಯನ್ನು ಮರು ನಾಮಕರಣ ಮಾಡಿ, ಎಲ್ಲರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಾದ್ಯಂತ ರೈತರಿಗೆ ಕಂಪನಿಯವರು ಪೂರೈಸಿದ ಕಳಪೆ ಬೀಜವನ್ನು ಬಿತ್ತಿ ರೈತ ಸಂಕಷ್ಟದಲ್ಲಿ ಅನುಭವಿಸುತ್ತಿದ್ದಾನೆ. ಸರ್ಕಾರ ರೈತರಿಗೆ ನೆರವಾಗಿ ಕಂಪನಿಯವರಿಂದ ಪರಿಹಾರ ಕೊಡಿಸಬೇಕು. ರೈತರಲ್ಲಿ ಹೊಸ ಉತ್ಸಾಹ ತುಂಬಿ ಸರ್ಕಾರ ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲದಿದ್ದರೆ ರೈತಪರ ಸಂಘಟನೆಗಳು ಮತ್ತು ಕನ್ನಡ ಸಂಘಟನೆ ಮೂಲಕ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಲ್ಲಿಕಾರ್ಜುನ ಅಮರಗೋಳ, ನೀಲಕಂಠ ಲಂಡತ್ತಿನವರ, ಮುತ್ತು ಮೆಣಸಗಿ, ಮೈಲಾರಿ ಗೊಬ್ಬರಗುಂಪಿ, ಕುಮಾರ ಹಾನಗಲ್ಲ, ನೀಲಪ್ಪ ಕುಲಕರ್ಣಿ, ನಾಗರಾಜ ಪೂಜಾರ, ಯಲ್ಲಪ್ಪ ಅಣ್ಣಿಗೇರಿ, ಶಿವರಾಜ ಬೇವಿನಕಟ್ಟಿ, ಮಂಜುನಾಥ ಜಕ್ಕನ್ನವರ ಇದ್ದರು.