ಸಲೀಂ ಅಹ್ಮದ್ ಪ್ರವಾಸ
ಹಾವೇರಿ: ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ನ. 12ರಂದು ಹಾವೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನ. 12ರಂದು ಮಧ್ಯಾಹ್ನ 1.30ಕ್ಕೆ ಗದಗದಿಂದ ಹೊರಟು 2.30ಕ್ಕೆ ಹಾವೇರಿಗೆ ಆಗಮಿಸಿ ಸ್ಥಳೀಯ ಸಭೆಯಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳಸುವರು.
ಇಂದು ದತ್ತಿ ಉಪನ್ಯಾಸ
ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ನವೋದಯ ವಿದ್ಯಾ ಸಂಸ್ಥೆಯಲ್ಲಿ ನ. 12ರಂದು ಬೆಳಗ್ಗೆ 11 ಗಂಟೆಗೆ ವೀರಯ್ಯ ಕಳಸೂರಮಠ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಆಯೋಜಿಸಿದ್ದು, ಡಾ ಪ್ರೇಮಾನಂದ ಲಕ್ಕಣ್ಣನವರ ಉದ್ಘಾಟಿಸುವರು. ಪ್ರಾಚಾರ್ಯ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಮನ್ವಯಾಧಿಕಾರಿ ಜಿ. ಸುಮಾ ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಲ್ಲಿಕಾರ್ಜುನ ಬಳ್ಳಾರಿ, ಅಶೋಕ ಬಣಕಾರ, ಎಸ್.ಎಂ. ಪಾಟೀಲ ಹಾಗೂ ನವೋದಯ ವಿದ್ಯಾಸಂಸ್ಥೆ ಸದಸ್ಯರು ಆಗಮಿಸುವರೆಂದು ಅಧ್ಯಕ್ಷ ಮಾಲತೇಶ ಅರಳೀಮಟ್ಟಿ ತಿಳಿಸಿದ್ದಾರೆ.
ಹೆಸರು ನೋಂದಣಿಗೆ ಅವಧಿ ವಿಸ್ತರಣೆ
ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಚುನಾವಣಾ ಕ್ಷೇತ್ರದ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಹೊಸದಾಗಿ ಹೆಸರು ನೋಂದಾಯಿಸಲು ಹಾಗೂ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ನ. 15ರವರೆಗೆ ವಿಸ್ತರಿಸಲಾಗಿದೆ. ನ. 1ಕ್ಕಿಂತ ಮೂರು ವರ್ಷಗಳ ಹಿಂದೆ ಪದವೀಧರರಾದ ಬಗ್ಗೆ ದಾಖಲೆಯನ್ನು ಹೊಂದಿರುವವರು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಚುನಾವಣಾ ಗುರುತಿನ ಚೀಟಿಯ ಯಥಾಪ್ರತಿಯೊಂದಿಗೆ ಹಾವೇರಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಮೂನೆ 18ನ್ನು ಪಡೆದು, ಭರ್ತಿ ಮಾಡಿ, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹಾಗೂ ಅ. 1ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳ ಕುರಿತು ಆಕ್ಷೇಪಣೆ ಸಲ್ಲಿಸಲು ನ. 15ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ತಿಳಿಸಿದ್ದಾರೆ. ಮಾಹಿತಿಗೆ ದೂ. 08375-232445, ಮೊ. 9449804186 ಸಂಪರ್ಕಿಸಿ.
ಬೈಕ್ ಸವಾರ ಸಾವು
ಬ್ಯಾಡಗಿ: ಬೈಕ್ ಸವಾರ ನಿಯಂತ್ರಣ ತಪ್ಪಿ ಜಾನುವಾರು ಒಂದಕ್ಕೆ ಡಿಕ್ಕಿ ಹೊಡೆದು ಹಾವೇರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಮೋಟೆಬೆನ್ನೂರು ರಸ್ತೆಯಲ್ಲಿರುವ ರೇಲ್ವೆ ಗೇಟ್ ಬಳಿ ನಡೆದಿದೆ. ಮಲ್ಲೂರ ಗ್ರಾಮದ ಶಿವಯೋಗಿ ಶಿವಾನಂದಪ್ಪ ಅಣ್ಣಿಗೇರಿ (25) ಬ್ಯಾಡಗಿಯಿಂದ ಮೋಟೆಬೆನ್ನೂರಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಆಕಳಿಗೆ ಡಿಕ್ಕಿ ಹೊಡೆದಿದ್ದ. ಚಿಕಿತ್ಸೆಗಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವ ಇದ್ದ ಕಾರಣ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.