ಗ್ರಾಮಾಭಿವೃದ್ಧಿಗೆ ಶ್ರಮಿಸಿ: ಹೊಂಬರಡಿ
ರಾಣಿಬೆನ್ನೂರು: ಸಾಕ್ಷರತಾ ಯೋಜನೆ ಅಡಿಯಲ್ಲಿ ಗ್ರಾಪಂ ಸಂಯೋಜಕರು ಗ್ರಾಮಾಭಿವೃದ್ಧಿಯ ಶಕ್ತಿಗಳಾಗಿ ಕೆಲಸ ಮಾಡಬೇಕೆಂದು ತಾಲೂಕು ಲೋಕ ಶಿಕ್ಷಣ ಸಮಿತಿಯ ಸಂಯೋಜಕ ಆರ್.ಡಿ. ಹೊಂಬರಡಿ ಹೇಳಿದರು. ತಾಪಂ ಸಭಾಭವನದಲ್ಲಿ ನಡೆದ ತಾಲೂಕಿನ 35 ಗ್ರಾಪಂ ಸಂಯೋಜಕ ಹಾಗೂ ಸಹ ಸಂಯೋಜಕರ ಮಾಸಿಕ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಾಂತರ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಹಲವು ಯೋಜನೆಗಳ ಬಗ್ಗೆ ಗ್ರಾಪಂ ಸಂಯೋಜಕರು ಮಾಹಿತಿ ಪಡೆದಿರಬೇಕು. ಲೋಕ ಶಿಕ್ಷಣ ಸಮಿತಿ ನಿರ್ದೇಶನದಂತೆ ತಾಲೂಕಿನ 35 ಗ್ರಾಪಂ ಸಮಿತಿ ರಚಿಸಲಾಗಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 12, ಸಂಜೆ 4.30ರಿಂದ ರಾತ್ರಿ 8 ಗಂಟೆ ವರೆಗೆ ಪಂಚಾಯಿತಿ ಸಂಯೋಜಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಇಲ್ಲದಿದ್ದಲ್ಲಿ ತಾಲೂಕು ಸಮಿತಿಯ ಅಂತಿಮ ತೀರ್ಮಾನದ ಮೇರೆಗೆ ಸೇವೆಯಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಅಕ್ಟೋಬರ್ ತಿಂಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ, ಎಫ್ಎಎಂಎಸ್ ಮಾಹಿತಿ, ಕಲಿಕಾರ್ಥಿಗಳಿಗೆ ಮಾರ್ಗದರ್ಶನ, 2ನೇ ಹಂತದಲ್ಲಿ ಸ್ವಯಂ ಸೇವಕರಿಗೆ ತರಬೇತಿ ನೀಡಲು ತಯಾರಿ, ವೃತ್ತಿ ತರಬೇತಿ ಕಾರ್ಯಗಾರ ನಡೆಸಲು, ಬಾಳಿಗೆ ಬೆಳಕು ಬೋಧಕರ ಕೈಪಿಡಿಯ ಮಾಹಿತಿ ಹಾಗೂ ಸವಸಾಕ್ಷರರೆಂದು ಪ್ರಮಾಣಪತ್ರ ವಿತರಿಸಲು ನಿರ್ಣಯ ಮಾಡಿದ್ದಾಗಿ ಜಿಲ್ಲಾ ಸಂಯೋಜಕ ನಾರಾಯಣ ಕೆ. ತಿಳಿಸಿದರು.