ನಗರಸಭೆ ಹಾಲಿ, ಮಾಜಿ ಸದಸ್ಯರ ನಡುವೆ ಘರ್ಷಣೆ: ವ್ಯಕ್ತಿಗೆ ಗಾಯ
ಹಾವೇರಿ: ಕ್ಷುಲ್ಲಕ ಕಾರಣಕ್ಕೆ ನಗರಸಭೆಯ ಹಾಲಿ ಹಾಗೂ ಮಾಜಿ ಸದಸ್ಯರ ಬೆಂಬಲಿಗರ ನಡುವೆ ಘಷಣೆ ನಡೆದು, ಘಟನೆಯಲ್ಲಿ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡ ಘಟನೆ ನಗರಸಭೆ ಆವರಣದಲ್ಲಿ ಮಂಗಳವಾರ ನಡೆದಿದೆ.
ಕೆಜೆಪಿ ಕಾರ್ಯಕರ್ತ ಸಾಜೀದ್ ಅಹ್ಮದ್ ದಾರುಗಾರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಕಡತವೊಂದಕ್ಕೆ ಸಹಿ ಮಾಡಿಸುವ ಕಾರಣಕ್ಕಾಗಿ ಈ ಘಟನೆ ಜರುಗಿದೆ. ನಗರಸಭೆ ಮಾಜಿ ಸದಸ್ಯ ಬಾಬುಸಾಬ ಮೋಮಿನಗಾರ, ಸಾಜೀದ್ ಅಹ್ಮದ್ ದಾರುಗಾರ ಸೇರಿದಂತೆ ನಾಲ್ವರು ಕಡತವೊಂದಕ್ಕೆ ಸಹಿ ಮಾಡಿಸಲು ನಗರಸಭೆಗೆ ಆಗಮಿಸಿದ್ದರು. ಆಗ ಫೈಲ್ ಸರಿಯಾಗಿದೆಯೇ? ಆಯುಕ್ತರು ಸ್ಥಳ ಪರೀಶೀಲಿಸಲು ಸೂಚಿಸಿದ್ದು, ಆಮೇಲೆ ಸಹಿ ಮಾಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.
ಸಿಬ್ಬಂದಿಯಿಂದ ಕಡತ ಪಡೆದ ಮೋಮಿನಗಾರ ಹಾಗೂ ದಾರೂಗಾರ ಪೌರಾಯುಕ್ತ ಶಿವಕುಮಾರಯ್ಯ ಬಳಿ ಬಂದು ಸಹಿ ಮಾಡಬೇಕೆಂದು ವಿನಂತಿಸಿದ್ದಾರೆ. ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡುವ ವರೆಗೆ ಸಹಿ ಮಾಡಲು ಸಾಧ್ಯವಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಅಲ್ಲೇ ಇದ್ದ ನಗರಸಭೆ ಹಾಲಿ ಸದಸ್ಯ ಹನುಮಂತಪ್ಪ ಶರಸೂರಿ, ಕಾನೂನುಬಾಹಿರ ಕೆಲಸಕ್ಕೆ ಅವಕಾಶ ಕೊಡಬೇಡಿ ಎಂದು ಆಯುಕ್ತರಿಗೆ ಮನವಿ ಮಾಡಿದರು.
ಆಕ್ರೋಶಗೊಂಡ ಮೋಮಿನಗಾರ, ನಾವು ಆಯುಕ್ತರ ಜತೆ ಮಾತನಾಡುತ್ತಿದ್ದೇವೆ. ನಡುವೆ ನೀವು ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದರು. ಇದರಿಂದ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಕೈಕೈ ಮಿಲಾಯಿಸಿದರು. ಆಗ ಘರ್ಷಣೆ ನಡೆಯಿತು.
ಈ ಹೊತ್ತಿಗೆ ಕೆಲವರು ದಾರೂಗಾರ ಮೇಲೆ ಹಲ್ಲೆ ನಡೆಸಿ, ತೀವ್ರವಾಗಿ ಗಾಯಗೊಳಿಸಿದ್ದಾರೆ. ಘಟನೆ ಕುರಿತು ಗಾಯಾಳು ಸಾಜೀದ್ ಅಹ್ಮದ್ ದಾರುಗಾರ ನಗರ ಪೊಲೀಸ್ ಠಾಣೆಯಲ್ಲಿ ನಗರಸಭೆ ಅಧ್ಯಕ್ಷ, ಐವರು ಸದಸ್ಯರು ಸೇರಿ 15 ಜನರ ಮೇಲೆ ದೂರು ನೀಡಿದ್ದಾರೆ.
ಸೂಪರ್ಸೀಡ್ ಮಾಡಿ: ಓಲೇಕಾರ ಒತ್ತಾಯ
ಹಾವೇರಿ ನಗರಸಭೆ ಆಡಳಿತ ಹಿಡಿದ ದಿನದಿಂದ ಕಾಂಗ್ರೆಸ್ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಯಾವುದೇ ಮಾಹಿತಿ ಕೇಳಿದರೂ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಬಾಡಿಗೆ ಗೂಂಡಾಗಳಿಂದ ಹಲ್ಲೆ ಮಾಡಿಸುತ್ತಾರೆ. ಜನಸಾಮಾನ್ಯರು ನಗರಸಭೆಗೆ ಬರಲು ಹೆದರುವಂತಾಗಿದೆ. ಸರ್ಕಾರ ಕೂಡಲೇ ನಗರಸಭೆಯನ್ನು ಸೂಪರ್ಸೀಡ್ ಮಾಡಬೇಕು ಎಂದು ಮಾಜಿ ಶಾಸಕ ನೆಹರೂ ಓಲೇಕಾರ ಒತ್ತಾಯಿಸಿದ್ದಾರೆ.