ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 12
ಮುಸ್ಲಿಮರಿಲ್ಲದ ಗ್ರಾಮ ಮಾಕನೂರಿನಲ್ಲಿ ಹಿಂದೂಗಳೇ ಸೇರಿ 38 ವರ್ಷಗಳಿಂದ ಮುಸ್ಲಿಮರ ಪವಿತ್ರ ಹಬ್ಬ ಮೊಹರಂ ಆಚರಿಸುತ್ತಿದ್ದಾರೆ. ಈ ಬಾರಿ ನ. 14ರಂದು ಮೊಹರಂ ಆಚರಿಸಲು ಸಿದ್ಧತೆ ಪೂರ್ಣಗೊಂಡಿದೆ.
ಮಾರ್ಕಂಡೇಶ್ವರ ಮುನಿಗಳು ತಪಸ್ಸು ಮಾಡಿದ ಪವಿತ್ರ ಭೂಮಿ ಮಾಕನೂರಿನ ಮನೆ ಬಸವಣ್ಣ ದೇವಸ್ಥಾನ, ಮರಡಿ ಕೆಂಚಮ್ಮ ದೇವಸ್ಥಾನಗಳನ್ನು ಮೊಹರಂ ಹಬ್ಬಕ್ಕಾಗಿ ಅಲಂಕರಿಸಲಾಗಿದೆ.
ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿ ತುಂಗಭದ್ರಾ ನದಿ ದಡದಲ್ಲಿರುವ ಮಾಕನೂರು ಗ್ರಾಮದ ಮೂಲಕ ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಂಡು ಕಬ್ಬು, ಬತ್ತ, ಶೇಂಗಾ ಬೆಳೆಯುತ್ತಿದ್ದಾರೆ. 1992-93ರ 10 ದಿನ ರಭಸವಾಗಿ ಮಳೆ ಸುರಿದು ಮನೆಗಳೆಲ್ಲ ನೆಲಕ್ಕುರುಳಿದ ಮೇಲೆ ಜನ ಸುಭದ್ರ ಬುನಾದಿಯ ಮನೆಗಳನ್ನೂ ಕಟ್ಟಿಕೊಂಡಿದ್ದಾರೆ. ಆ ಮಳೆಯಿಂದ ಆಲೆದೇವರ ಗುಡಿಯೂ ಹಾನಿ ಅನುಭವಿಸಿತ್ತು. ಮುಸ್ಲಿಂ ಸಮುದಾಯದವರು ಗ್ರಾಮದಲ್ಲಿ ಇಲ್ಲದ ಕಾರಣ ಇದರ ದುರಸ್ತಿಗೆ ಆಗ ಯಾರೂ ಮುಂದಾಗಲಿಲ್ಲ.
ಮಸೀದಿ ಮರು ನಿರ್ಮಾಣ
ಬಿದ್ದಿರುವ ಮಸೀದಿಯಲ್ಲೇ ಅಲೆದೇವರನ್ನು ಕುಳ್ಳಿರಿಸಿ, ಆಂಜನೇಯ ದೇವಸ್ಥಾನದ ಎದುರು ಕಟ್ಟಿರುವ ಆಲೇಗುಣಿ ಕಟ್ಟೆ ಹತ್ತಿರ ಮೊಹರಂ ಹಬ್ಬ ಆಚರಿಸುತ್ತಿದ್ದರು. ಮಸೀದಿ ದುರಸ್ತಿಗೆ ಗ್ರಾಮಸ್ಥರು ದೇಣಿಗೆ ನೀಡಿದ್ದಾರೆ. ಹಳೆ ಪಂಚಾಯತ್ ಕಟ್ಟಡದ ಪಕ್ಕದಲ್ಲಿ ಮಾಕನೂರು ಗ್ರಾಮದ ಕೊಟೆ ರಸ್ತೆ ಸಮೀಪ ಅಲೇದೇವರ ಗುಡಿಯನ್ನು (ಮಸೀದಿ) ಹಿಂದೂಗಳು ರು. 50 ಸಾವಿರ ವೆಚ್ಚದಲ್ಲಿ ಆರ್‌ಸಿಸಿ ಕಟ್ಟಡವಾಗಿ ನಿರ್ಮಿಸುತ್ತಿದ್ದಾರೆ.
ಊರಲ್ಲಿದ್ದ ಮುಸ್ಲಿಂ ಕುಟುಂಬ 60 ವರ್ಷಗಳ ಹಿಂದೆಯೇ ಹೊಲ-ಮನೆ ಮಾರಿ ಬೇರೆಡೆಗೆ ತೆರಳಿದೆ. ಮಾಕನೂರು ಗ್ರಾಮದಿಂದ ಎಣ್ಣಿಹೊಸಳ್ಳಿಗೆ ತೆರಳುವ ರಸ್ತೆ ಪಕ್ಕದಲ್ಲಿರುವ ಮುಲ್ಲಾನ ಹೊಲಗಳು ಎಂದು ಕರೆಯುವ ಜಮೀನು ಇದಕ್ಕೆ ಸಾಕ್ಷಿ. ಈಗ 38 ವರ್ಷಗಳಿಂದ ಮಾಕನೂರು ಗ್ರಾಮಕ್ಕೆ ಬೇರೆ ಕಡಿಯಿಂದ ಮೌಲ್ವಿಗಳನ್ನು ಕರೆಯಿಸಿ ಮೊಹರಂ ಆಚರಿಸುತ್ತಿದ್ದೇವೆ ಎಂದು ಮುಖಂಡರಾದ ಶಿದ್ದಲಿಂಗಪ್ಪ ಕಾಯಕದ, ತಿಪ್ಪಣ್ಣ ಹಲಗೇರಿ, ತಿರುಕಪ್ಪ ನಂದಿಬಸಪ್ಪರ, ತಿಪ್ಪಣ್ಣ ಗಾಡಿ, ಆಂಜನೆಪ್ಪ ಬೆಳವಿಗಿ, ನಾಗರಾಜ ಕಾಯಕದ ಹಾಗೂ ರಾಮಣ್ಣ ಎಲ್.ಎಸ್. ತಿಳಿಸಿದರು.
ಮೊಹರಂ ಆಚರಿಸುವುದರಿಂದ ನಮಗೆ ಒಳ್ಳೆಯದಾಗಿದೆ. ಸಂಕಷ್ಟಗಳು ದೂರವಾಗಿವೆ. ಹೀಗಾಗಿ, ಆಚರಣೆ ಮುಂದುವರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
-ಸಾಬ್ಜನ ಇಟಗಿ