ಸೌಹಾರ್ದದಿಂದ ಮೊಹರಂ ಆಚರಿಸಿ: ಮಂಟೂರ
ಹಾನಗಲ್ಲ: ಪರಸ್ಪರ ಸಹಕಾರ ಹಾಗೂ ಸೌಹಾರ್ದದಿಂದ ಪ್ರತಿಯೊಬ್ಬರೂ ಹಬ್ಬ ಆಚರಿಸಬೇಕು. ಮೊಹರಂ ಹಬ್ಬದಲ್ಲಿ ಶಾಂತಿಗೆ ಭಂಗ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಹಾನಗಲ್ಲ ಸಿಪಿಐ ಬಿ.ಎಸ್. ಮಂಟೂರ ಮನವಿ ಮಾಡಿದರು.
ಅಕ್ಕಿಆಲೂರು ಪೊಲೀಸ್ ಹೊರಠಾಣೆಯಲ್ಲಿ ಮೊಹರಂ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಿ, ಶಾಂತಿ ಕಾಪಾಡುವ ಅಗತ್ಯವಿದೆ. ವದಂತಿಗಳಿಗೆ ಕಿವಿಗೊಡದೆ ಸಾಮರಸ್ಯದಿಂದ ಹಬ್ಬ ಆಚರಿಸಿ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ಕಾನೂನನ್ನು ಕೈಗೆ ತೆಗೆದುಕೊಳ್ಳದೇ ತಾಳ್ಮೆಯಿಂದ ವರ್ತಿಸಿ. ಮದ್ಯಪಾನ ಮಾಡಿ ದುಂಡಾವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪಿಎಸ್‌ಐ ಮಹದೇವ ಯಲಿಗಾರ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಬ್ದುಲ್ ಕರೀಂ ಹುಬ್ಬಳ್ಳಿ, ತಾಪಂ ಮಾಜಿ ಸದಸ್ಯ ಮೆಹಬೂಬ್ ಅಲಿ ಬ್ಯಾಡಗಿ, ಬಸೀರಖಾನ ಪಠಾಣ, ಹಸನಖಾನ ಪಠಾಣ, ಅಬ್ದುಲ್ ಕರೀಂ ಹಿತ್ತಲಮನಿ, ಅಲ್ತಾಫ್ ಶಿರಹಟ್ಟಿ, ಸುರೇಶ ಮಾದರ, ಎಚ್‌ಸಿ ಬಿ.ವೈ. ಇಟಗಿ ಇದ್ದರು.