ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೂಂಡಾ ವರ್ತನೆ: ಕೆಜೆಪಿ ಪ್ರತಿಭಟನೆ

Lingaraj Badiger
Updated On : 14 Nov 2013, 11:16 am

ಹಾವೇರಿ: ಇಲ್ಲಿಯ ನಗರಸಭೆಯಲ್ಲಿ ಕಾಂಗ್ರೆಸ್ ಗೂಂಡಾ ವರ್ತನೆ ತೋರುತ್ತಿದ್ದು, ಅಧ್ಯಕ್ಷರನ್ನು ವಜಾಗೊಳಿಸಬೇಕು. ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಆಗ್ರಹಿಸಿ ಕೆಜೆಪಿ ನಗರ ಘಟಕ ಬುಧವಾರ ನಗರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿತು.
ನಗರಸಭೆಯಲ್ಲಿ ಮಂಗಳವಾರ ನಡೆದ ಘಟನೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಕೆಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಧ್ಯಕ್ಷರು ನಗರಸಭೆ ಆವರಣದಲ್ಲೇ ಸಹಚರರನ್ನು ಇಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಜನಸಾಮಾನ್ಯರು ನ್ಯಾಯಯುತ ಹಕ್ಕುಗಳನ್ನು ಕೇಳುವಂಥ ವಾತಾವರಣ ಇಲ್ಲವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಅವರ ಮೇಲೆ ದೌರ್ಜನ್ಯ ನಡೆಸಿ ಗೂಂಡಾ ವರ್ತನೆ ತೋರುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಮಂಗಳವಾರ ನಡೆದ ಘಟನೆಯೇ ಸಾಕ್ಷಿ. ಕಚೇರಿ ಕೆಲಸಕ್ಕಾಗಿ ಹೋಗಿದ್ದ ಸಾಜಿದ್ ಅಹ್ಮದ್ ಎಂಬವರ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿದ್ದಾರೆ. ಕಚೇರಿ ಆವರಣದಲ್ಲೇ ಅಧ್ಯಕ್ಷ ಹಾಗೂ ಸದಸ್ಯರು ರಾಜಕೀಯ ದ್ವೇಷದಿಂದ ಈ ರೀತಿ ದಬ್ಬಾಳಿಕೆ ಮಾಡಿದ್ದಾರೆ. ಪೌರಾಯುಕ್ತರೂ ಕಾನೂನಾತ್ಮಕ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಜನರ ಹಿತ ಕಾಯುವ ದೃಷ್ಟಿಯಿಂದ ಹೋರಾಟ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಅಧ್ಯಕ್ಷ ಐ.ಯು. ಪಠಾಣ ಹಾಗೂ ಹನುಮಂತಪ್ಪ ಅವರ ಸದಸ್ಯತ್ವ ರದ್ದುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ನಗರಸಭೆ ಆವರಣದಲ್ಲಿ ಮುಕ್ತ ಹಾಗೂ ನಿರ್ಭಯದ ವಾತಾವರಣ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಈರಣ್ಣ ಸಂಗೂರ, ಸದಸ್ಯರಾದ ಶಿವಬಸವ ವನ್ನಳ್ಳಿ, ಜಗದೀಶ ಮಲಗೋಡ, ಇರ್ಫಾನ್ ಪಠಾಣ, ಹನುಮಂತಪ್ಪ ದೇವಗಿರಿ, ಯಲ್ಲಮ್ಮ, ಪರಶುರಾಮ ಮೈಲಾರಪ್ಪನವರ, ಸತೀಶ ಹಾವೇರಿ, ಗಂಗಮ್ಮ ಯರೇಶೀಮಿ, ಸುರೇಶ ಹೊಸಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement